janadhvani

Kannada Online News Paper

ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಪ್ರಕರಣ: ಇನ್ನೇನೂ ಮಾಡಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್ ನಲ್ಲಿ ಕೇಂದ್ರ ಸರ್ಕಾರ

ಏತನ್ಮಧ್ಯೆ ನಿಮಿಷಪ್ರಿಯಾ ಅವರ ಬಿಡುಗಡೆಗಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಧ್ಯಪ್ರವೇಶಿಸಿದ್ದಾರೆಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿದೆ.

ಹೊಸದಿಲ್ಲಿ :ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟು ಯೆಮೆನ್ ಜೈಲಿನಲ್ಲಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆ ತಡೆಯಲು ಭಾರತ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ, ಈ ವಿಷಯದಲ್ಲಿ ಭಾರತಕ್ಕೆ ತಲುಪಲು ಸಾಧ್ಯವಿರುವ ಮಿತಿಯನ್ನು ಸರಕಾರ ಈಗಾಗಲೇ ತಲುಪಿದೆ ಎಂದು ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಯೆಮೆನ್ ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ ಆದ್ದರಿಂದ ಸರಕಾರ ಹೆಚ್ಚಿನದನ್ನೇನೂ ಮಾಡಲು ಸಾಧ್ಯವಿಲ್ಲ.ಬ್ಲಡ್ ಮನಿ (Blood money) ವಿಚಾರ ಖಾಸಗಿ ಮಾತುಕತೆಯಾಗಿದೆ. ಸರಕಾರ ಖಾಸಗಿ ಮಾರ್ಗಗಳ ಮೂಲಕ ನಿಮಿಷಾ ಅವರನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಸರಕಾರಿ ವಕೀಲ ಎಜಿ ವೆಂಕಟರಮಣಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಭಾರತ ಸರಕಾರ ಯಾವ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಒಂದು ಮಿತಿಯಿದೆ. ನಾವು ಅದನ್ನು ತಲುಪಿದ್ದೇವೆ. ಯೆಮೆನ್ ಇತರ ದೇಶಗಳಂತೆ ಅಲ್ಲ. ನಾವು ಸಾರ್ವಜನಿಕವಾಗಿ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಲಿಲ್ಲ. ನಾವು ಖಾಸಗಿ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದೇವೆ’ ಎಂದು ಸರಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.

ಗಲ್ಲುಶಿಕ್ಷೆಯ ದಿನಾಂಕವನ್ನು ಈಗಾಗಲೇ ಯೆಮೆನ್ ನ್ಯಾಯಾಲಯ ಪ್ರಕಟಿಸಿದ್ದು, ಆ ಪ್ರಕಾರ ಇದೇ ತಿಂಗಳ 16 ನೇ ತಾರೀಖಿನಂದು ಗಲ್ಲುಶಿಕ್ಷೆ ಜಾರಿಯಾಗಲಿದೆ. ಏತನ್ಮಧ್ಯೆ ನಿಮಿಷಪ್ರಿಯಾ ಅವರ ಬಿಡುಗಡೆಗಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಧ್ಯಪ್ರವೇಶಿಸಿದ್ದಾರೆಂದು ಮಲಯಾಳಂ ಪತ್ರಿಕೆಗಳು ವರದಿ ಮಾಡಿದೆ.

ಅವರು, ಯೆಮೆನ್‌ನ ಪ್ರಮುಖ ಸೂಫಿ ವಿದ್ವಾಂಸರ ಮೂಲಕ ಯೆಮೆನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಹತ್ಯೆಗೊಳಗಾದ ಯೆಮೆನ್ ಪ್ರಜೆ ತಲಾಲ್ ಸಹೋದರನೊಂದಿಗೂ ಸಂವಹನ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆಶಾದಾಯಕ ಪ್ರತಿಕ್ರಿಯೆ ಲಭಿಸಿರುವುದಾಗಿ ಕಾಂತಪುರಂ ಉಸ್ತಾದರಿಗೆ ಸಂಬಂಧಿಸಿದಂತೆ ಮರ್ಕಝ್ ಮೂಲಗಳಿಂದ ಮಾಹಿತಿ ಲಭಿಸಿದೆ.

ನಿಮಿಷಪ್ರಿಯ ಬಿಡುಗಡೆ ನೆರವು ಸಮಿತಿಗೆ ಯೆಮೆನ್ ಸುನ್ನಿ ವಿದ್ವಾಂಸ ಶೈಖ್ ಹಬೀಬ್ ಉಮರ್ ಬಿನ್ ಹಾಫಿಝ್ ಮೂಲಕ ಹತ್ಯೆಗೊಳಗಾದ ತಲಾಲ್ ಅಬ್ದುಲ್ ಮಹ್ದಿ ಅವರ ಸಂಬಂಧಿಕರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನೆರವು ಸಮಿತಿಗೆ ಮೃತ ವ್ಯಕ್ತಿಯ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.