janadhvani

Kannada Online News Paper

ಕಲಬುರುಗಿಯಲ್ಲಿ ಪಾಕ್ ಧ್ವಜ- ಬಜರಂಗದಳ ಕಾರ್ಯಕರ್ತರು ಪೋಲೀಸ್ ವಶಕ್ಕೆ

ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ

ಕಲಬುರಗಿ: ಪಹಲ್ಗಾಮನಲ್ಲಿ ಅಮಾಯಕರ‌ ಮೇಲಿನ ಉಗ್ರರ ದಾಳಿ ಖಂಡಿಸಿ ನಗರದ ವಿವಿಧೆಡೆ ಪಾಕಿಸ್ತಾನದ ಧ್ವಜವನ್ನು ನೆಲಕ್ಕೆ ಅಂಟಿಸುವ ಮುಖಾಂತರ ಬಜರಂಗ ದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪ್ರಚೋಧಿಸುವ ವಿಧಾನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಜಗತ್ ವೃತ್ತದಲ್ಲಿ ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಗುಪ್ತಚರ ಇಲಾಖೆ ಸಿಬ್ಬಂದಿ, ಮತ್ತು ಬ್ರಹ್ಮಪುರ ಠಾಣೆಯ ಪೊಲೀಸರು ಅಂಟಿಸಿದ ಧ್ವಜವನ್ನು ತೆರವುಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್‌.ಡಿ, ಭಯೋತ್ಪಾದನಾ ಕೃತ್ಯ ಖಂಡಿಸಿ, ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಸುತ್ತಿವೆ. ನಗರದಲ್ಲೂ ಕೆಲವರು ಅನುಮತಿ ಇಲ್ಲದೆ ಪಾಕಿಸ್ತಾನ ಧ್ವಜ ಅಂಟಿಸಿರುವುದು ಕಂಡುಬಂದಿದೆ. ಸದ್ಯಕ್ಕೆ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ 6 ಮಂದಿ ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಎಸ್‌.ಡಿ ಅವರು ತಿಳಿಸಿದ್ದಾರೆ.

ಉಗ್ರರ ದಾಳಿ‌ ಖಂಡನೀಯ. ಅದರ ವಿರುದ್ಧದ ಪ್ರತಿಭಟನೆಯನ್ನು ಕಾನೂನಿನ‌ ಚೌಕಟ್ಟಿನಲ್ಲಿ ನಡೆಸಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.