janadhvani

Kannada Online News Paper

ಕೇಂದ್ರ ಸರ್ಕಾರದ ಬೇಜವಾಬ್ದಾರಿ ತನಕ್ಕೆ ಬಕೆಟ್ ಮಾಧ್ಯಮಗಳೇ ಪ್ರಮುಖ ಕಾರಣ

ದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆಯುತ್ತಿರುವಾಗಲೂ ದೇಶದ ಸುರಕ್ಷತೆಯ ಲೋಪವನ್ನು ಎತ್ತಿತೋರಿಸಲು ಯಾವುದೇ ಮಾಧ್ಯಮದವನಿಗೂ ಗಂಡಸುತನ ಇಲ್ಲವಾಗಿದೆ

ಕೇಂದ್ರದ ಬಿಜೆಪಿ ಸರ್ಕಾರದ ಯಾವುದೇ ವೈಫಲ್ಯಗಳನ್ನು ಎತ್ತಿ ತೋರಿಸದೆ, ಸದಾ ಮೋಶಾ ವರ್ಣನೆಯಲ್ಲಿ ತೊಡಗಿರುವ ದೇಶದ ಮಾಧ್ಯಮಗಳಿಂದಾಗಿ ಸರ್ಕಾರವು ತನ್ನ ಜವಾಬ್ದಾರಿಕೆಯನ್ನು ಮರೆತು ಬಿಟ್ಟಿದೆ. ತಮ್ಮ ಪತ್ರಿಕಾ ಧರ್ಮವನ್ನು ಮೋಶಾ ಕೈಯಲ್ಲಿ ಅಡವಿಟ್ಟಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಮಾಧ್ಯಮ ವರ್ಗದವರಿಗೆ ಇಲ್ಲದಂತಾಗಿದೆ.

ತಮ್ಮ ಜವಾಬ್ದಾರಿಕೆಯನ್ನು ಮರೆತು ನಿದ್ರೆಗೆ ಜಾರಿಬಿಡುವುದನ್ನು ತಪ್ಪಿಸಲು ಮಾಧ್ಯಮಗಳು ಸಕಾಲಕ್ಕೆ ಆಡಳಿತ ವರ್ಗವನ್ನು ಬಡಿದೇಳಿಸುವ ಕಾರ್ಯವನ್ನು ನಡುಸುತ್ತಲೇ ಇರಬೇಕಾಗಿದೆ. ಇದು ದೇಶದ ಪ್ರಜೆಗಳ ಬಗ್ಗೆ ಕಾಳಜಿ ವಹಿಸುವ ಮಾಧ್ಯಮ ಧರ್ಮವಾಗಿದೆ. ಯಾವುದೇ ದೇಶದ ಆಡಳಿತ ವರ್ಗವು ಆಯಾ ದೇಶದಲ್ಲಿರುವ ಮಾಧ್ಯಮಗಳ ಪ್ರಹಾರದಂತಹಾ ಪ್ರಶ್ನೆಗಳ ಮುಂದೆ ಉತ್ತರಿಸುವ ನಿಟ್ಟಿನಲ್ಲಾದರೂ, ಒಂದಿಷ್ಟು ಅಭಿವೃದ್ಧಿ ಯನ್ನು ತರಲು ಶ್ರಮಿಸುವುದುಂಟು. ಆದರೆ, ಭಾರತದ ಪ್ರಸ್ತುತ ಬಿಜೆಪಿ ಸರ್ಕಾರಕ್ಕೆ ಅದರ ಬಗ್ಗೆ ತಲೆಗೆಡಿಸುವ ಅಗತ್ಯವೇ ಇಲ್ಲ, ಸರ್ಕಾರದ ಎಲ್ಲಾ ರೀತಿಯ ವೈಫಲ್ಯವನ್ನು ಮುಚ್ಚಿಹಾಕಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಚಾಣಾಕ್ಷತೆಯನ್ನು ಬಕೆಟ್ ಮಾಧ್ಯಮಗಳು ಬಹಳ ಸಲೀಸಾಗಿ ನಡೆಸುತ್ತಿದೆ. ಮಾಧ್ಯಮಗಳು ನಿಷ್ಠಾವಂತ ಸೇವೆ ಸಲ್ಲಿಸುತ್ತಿದ್ದರೆ ಇಂದು ದೇಶಕ್ಕೆ ಇಂತಹಾ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ದೇಶದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ, ದೇಶ ಅಪಾಯದಲ್ಲಿದೆ ಎಂದು’ಮೋಶಾ’ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ನಂಬಿರುವ ಪ್ರಜೆಗಳಿಗೆ ಈಗ ಮನದಟ್ಟಾಗಿದೆ. ಪಹಲ್ಗಾಮ್ ದಾಳಿಯ ಬಗ್ಗೆ ಭದ್ರತಾ ಲೋಪ ಸಂಭವಿಸಿದೆ ಎಂದು ದೇಶದ ಗೃಹ ಸಚಿವರಾದ ಅಮಿತ್ ಶಾ ಅವರೇ ಒಪ್ಪಿಕೊಂಡಿದ್ದಾರೆ. ಸರ್ಕಾರದ ಇಂಥಾ ಬೇಜವಾಬ್ದಾರಿ ತನಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕಿದೆ?

ಸಾವಿರಾರು ಪ್ರವಾಸಿಗರ ತಾಣವಾಗಿರುವ ಕಾಶ್ಮೀರದ ಒಂದು ಪುಟ್ಟ ಗ್ರಾಮದಲ್ಲೂ ಸುರಕ್ಷತೆಯನ್ನು ಒದಗಿಸಲು ಸಾಧ್ಯವಾಗದ ಕೇಂದ್ರದ ಬಿಜೆಪಿ ಸರ್ಕಾರದ ಕೈಯಲ್ಲಿ ಇಡೀ ದೇಶವು ಸುರಕ್ಷಿತವೇ ಎಂಬ ಸಂದೇಹವು ಜನ ಸಾಮಾನ್ಯರಲ್ಲಿ ಮೂಡಿದೆ. ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ದೇಶದಲ್ಲಿ ನಡೆದ ಉಗ್ರರ ದಾಳಿಗಳೇ ಇದಕ್ಕೆ ಸಾಕ್ಷಿಯಾಗಿದೆ. ರಾಜಕೀಯ ಲಾಭಕ್ಕಾಗಿ ದೇಶದ ಅಮಾಯಕರನ್ನೂ, ಯೋಧರನ್ನೂ ಬಲಿ ನೀಡಲಾಗುತ್ತಿದೆಯೇ ಎಂಬ ಸಂದೇಹವು ಭಾರತೀಯರಲ್ಲಿ ಮೂಡಿದೆ.

ಪಹಲ್ಗಾಮ್‌ನಲ್ಲಿ 26 ಮಂದಿ ಹತರಾಗಿ 48 ಗಂಟೆಗಳು ಕಳೆದಿವೆ. ಮೃತ ದೇಹಗಳು ಇನ್ನು ಅಂತಿಮ ಸಂಸ್ಕಾರ ಸಹ ಆಗಿಲ್ಲ.ದೇಶಾದ್ಯಂತ ಜನ ಜಾತಿ ಮತ ಭೇದವಿಲ್ಲದೆ ಸಂತಾಪ ಸಭೆ, ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಇಡೀ ದೇಶ ದುಃಖದಲ್ಲಿದೆ. ದೇಶದ ಭದ್ರತಾ ಲೋಪದ ಬಗ್ಗೆ ಜನತೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಈ ದೇಶದ ಪ್ರಧಾನಿ ಮೋದಿಯವರು ಸರ್ವಪಕ್ಷಗಳ ಸಭೆಗೂ ಹಾಜರಾಗದೆ, ಬಿಹಾರದಲ್ಲಿ ಚುನಾವಣೆ ಪ್ರಚಾರದಲ್ಲಿ ಸಂತೋಷದಿಂದ ವೇದಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮೃತರಾದವರ ಅಂತಿಮ ಸಂಸ್ಕಾರ ಸಹ ಮುಗಿದಿಲ್ಲ ಆಗಲೇ ಚುನಾವಣಾ ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಈ ಹಿಂದೆ ನಡೆದ ಪುಲ್ವಾಮಾ ದಾಳಿಯು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಉರಿ ದಾಳಿ, ಕಾರ್ಗಿಲ್ ದಾಳಿ, ಪುಲ್ವಾಮಾ ದಾಳಿ, ಅಮರನಾಥ ದಾಳಿ, ಪಠಾಣ್ ಕೋಟ್ ದಾಳಿ, ಸಂಸತ್ ಮೇಲಿನ ದಾಳಿ, ಅಕ್ಷರಧಾಮ ದಾಳಿ, ಕಂದಹಾರ್ ಐಸಿ814 ವಿಮಾನ ಅಪಹರಣ, ಕಾಶ್ಮೀರಿ ಹಿಂದೂಗಳ ವಲಸೆ ಮತ್ತು ಇದೀಗ ನಡೆದ ಪೆಹಲ್ಗಾಮ್ ದಾಳಿ ಇವೆಲ್ಲವೂ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿದೆ. ಇದೆಲ್ಲವೂ ರಾಜಕೀಯ ಪ್ರೇರಿತವೇ ಎಂಬ ಜನರ ಸಂದೇಹಗಳಿಗೆ ಪುಷ್ಠಿ ನೀಡಿದೆ.

ಆದರೆ, ಪುಲ್ವಾಮಾ ದಾಳಿ ಕುರಿತ ತನಿಖೆ ಏನಾಯಿತು? ಯಾಕೆ ಪುಲ್ವಾಮಾ ಪ್ರಕರಣವನ್ನು ಹೂತು ಹಾಕಲಾಯಿತು? ತಮ್ಮ ರಾಜಕೀಯ ಲಾಭಕ್ಕಾಗಿ ಇನ್ನಷ್ಟು ಜೀವಗಳು ಬಲಿಯಾಗಬೇಕು? ಇದೀಗ ಗೃಹ ಸಚಿವ ಅಮಿತ್ ಶಾ ಅಡಿಯಲ್ಲಿ ನಡೆದಿರುವ ಪಹಲ್ಗಾಮ್ ಹತ್ಯಾಕಾಂಡವು ಭಾರೀ ಗುಪ್ತಚರ ವೈಫಲ್ಯ ಎಂದು ಮಾಧ್ಯಮ ವರ್ಗದವರಿಗೆ ಅನಿಸುವುದಿಲ್ಲವೇಕೆ?.

ಮಾಧ್ಯಮಗಳು ಸತ್ಯವನ್ನು ಮುಚ್ಚಿಟ್ಟು, ಸುಳ್ಳು ಸುದ್ದಿಗಳನ್ನು ಪ್ರಚಾರಪಡಿಸುವ ಗಡಿಬಿಡಿಯಲ್ಲಿ ಮುಳುಗಿರುವುದು ದೇಶದ ನಾಗರಿಕರ ಪಾಲಿಗೆ ಮಹಾ ದುರಂತವಾಗಿದೆ. ದೇಶದ ಜನರನ್ನು ಹಿಂದೂ ಮುಸ್ಲಿಂ ಎಂದು ವಿಭಜಿಸುವ ನೀತಿಗೆಟ್ಟ ಮಾಧ್ಯಮ ವರ್ಗವು ದೇಶಕ್ಕೆ ಶಾಪವಾಗಿದೆ.

ಗೃಹ ಸಚಿವರು ಮತ್ತು ರಕ್ಷಣಾ ಸಚಿವರ ಬೇಜವಾಬ್ದಾರಿ ತನದಿಂದಾಗಿ ದೇಶದಲ್ಲಿ ಉಗ್ರರು ತಾಂಡವಾಡುತ್ತಿದ್ದಾರೆ. ಉಗ್ರರು ಅಟ್ಟಹಾಸ ಮೆರೆಯುತ್ತಿರುವಾಗಲೂ ದೇಶದ ಸುರಕ್ಷತೆಯ ಲೋಪವನ್ನು ಎತ್ತಿತೋರಿಸಲು ಯಾವುದೇ ಮಾಧ್ಯಮದವನಿಗೂ ಗಂಡಸುತನ ಇಲ್ಲವಾಗಿದೆ. ಬದಲಾಗಿ ಮೋಶಾ ವನ್ನು ಕೊಂಡಾಡುತ್ತಲೇ ಕಾಲ ಕಳೆಯುತ್ತಿದ್ದಾರೆ. ಹಿಂದೂ ಮುಸ್ಲಿಂ ಎನ್ನುತ್ತಾ ದೇಶದ ನಾಗರಿಕರ ಮಧ್ಯೆ ಕೋಮು ವಿಷಬೀಜವನ್ನು ಬಿತ್ತರಿಸಿ, ದೇಶದ ಸಾಮರಸ್ಯವನ್ನು ಕೆಡವಲು ಮುಂದಾಗಿದ್ದಾರೆ. ಮಾಧ್ಯಮಗಳಲ್ಲಿ ಕಾಣುತ್ತಿರುವುದೇ ಸತ್ಯವೆಂದು ಭಾವಿಸಿರುವ ಕೆಲವು ಬಡಪಾಯಿ ಅಂಧಭಕ್ತರು ಮೋಶಾ ಗೆ ಜೈಕಾರವನ್ನು ಕೂಗುವುದರಲ್ಲಿ ಕಾಲ ಕಳೆಯುತ್ತಿದ್ದಾರೆ.

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿ ಮಾರ್ಪಟ್ಟಿದೆ. ಅಧಿಕಾರ ಹಿಡಿಯುವ ಹೊತ್ತಿನಲ್ಲಿ ನೀಡಿದ ಭರವಸೆಗಳೆಲ್ಲವೂ ನುಚ್ಚು ನೂರಾಗಿದೆ. ಇದರ ಬಗ್ಗೆ ಕೂಡ ಚಕಾರವೆತ್ತಲು ಮಾಧ್ಯಮಗಳಿಗೆ ಧಮ್ಮೇ ಇಲ್ಲ. ದೇಶಾಡಳಿತ ಎಂದರೆ, ಅಲ್ಲಿನ ಪ್ರಜೆಗಳ ಮಧ್ಯೆ ಭಿನ್ನತೆಯನ್ನು ಸೃಷ್ಟಿಸಲು ಕೆಲವು ಅಸಾಂವಿಧಾನಿಕ ಮಸೂದೆಗಳನ್ನು ತಂದು ವಿವಾದಾತ್ಮಕ ಕಾನೂನುಗಳನ್ನು ರೂಪೀಕರಿಸುವುದೆಂದು ಭಾವಿಸಿದ್ದಾರೆಯೇ ಪ್ರಧಾನಿ ಮತ್ತು ಸಹಚರರು?

ಕೇಂದ್ರ ಸರ್ಕಾರವು ಯಾವುದೇ ಜನೋಪಯೋಗಿ ಯೋಜನೆಗಳನ್ನು ರೂಪೀಕರಿಸದೆ, ಪದೇ ಪದೇ ಮುಸ್ಲಿಂ ವಿರೋಧವನ್ನೇ ಬಂಡವಾಳವನ್ನಾಗಿಸಿ ನೂತನ ಮಸೂದೆ ಮಂಡನೆಗಳಲ್ಲಿ ತೊಡಗಿರುವುದು ದೇಶದ ಅಭಿವೃದ್ದಿಗೆ ಹೊಡೆತ ಬೀಳುವಂತೆ ಮಾಡಿದೆ. ವಿತ್ತ ಸಚಿವರು ಬಡಪಾಯಿಗಳ ಜೇಬಿಗೆ ಕತ್ತರಿ ಹಾಕಿ ಪ್ರತಿಯೊಂದು ನಿತ್ಯೋಪಯೋಗಿ ವಸ್ತುವಿಗೂ ಜಿಎಸ್ಟಿ ಜಾರಿಗೆ ತಂದು ಸರ್ಕಾರದ ಬೊಕ್ಕಸ ತುಂಬುವುದರಲ್ಲಿ ಬಿಝಿಯಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮುಸ್ಲಿಮರ ಬಗ್ಗೆ ಬಹಳ ಕಾಳಜಿ, ತ್ರಿವಳಿ ತ್ವಲಾಖ್, ವಖ್ಫ್ ತಿದ್ದುಪಡಿ ಮಸೂದೆ ಮುಂತಾದವುಗಳನ್ನು ಜಾರಿಗೆ ತಂದು ಸಮಯ ವ್ಯರ್ಥಗೊಳಿಸುತ್ತಿದ್ದಾರೆಯೇ ವಿನಃ ದೇಶದ ಜನತೆಗೆ ಯಾವುದೇ ಪ್ರಯೋಜನವಿಲ್ಲ.

ಇದೆಲ್ಲವನ್ನೂ ಸರ್ಕಾರದ ದೊಡ್ಡ ಸಾಧನೆಯೆಂಬಂತೆ ಬಕೆಟ್ ಮಾಧ್ಯಮಗಳು ಭರ್ಜರಿ ಪ್ರಚಾರ ಕೊಡುತ್ತದೆ. ಆಡಳಿತ ವರ್ಗಕ್ಕೆ ತಮ್ಮ ಜವಾಬ್ದಾರಿಕೆಯಿಂದ ನುಣುಚಿಕೊಳ್ಳಲು ಮಾಧ್ಯಮಗಳ ಈ ಪುಕ್ಸಟ್ಟೆ ಪ್ರಚಾರವೇ ಮುಖ್ಯ ಕಾರಣ. ಇನ್ನಾದರೂ ದೇಶದ ಮಾಧ್ಯಮಗಳು ತಮ್ಮ ಪತ್ರಿಕಾ ಧರ್ಮವನ್ನು ನಿಷ್ಠೆಯಿಂದ ಬಳಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡ ಬೇಕಾದ ಅನಿವಾರ್ಯತೆ ಇದೆ.