ಮಂಗಳೂರು,ಏ.16: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಿತ ವಕ್ಫ್ ತಿದ್ದುಪಡಿ ಕಾನೂನು ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮಂಗಳೂರಿನಲ್ಲಿ ಏ.18 ರಂದು ಉಲಮಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಕರ್ನಾಟಕ ಉಲಮಾ ಕೋಆರ್ಡಿನೇಷನ್ ವತಿಯಿಂದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ಇವರ ನೇತೃತ್ವದಲ್ಲಿ ಏ.18 ರಂದು ಶುಕ್ರವಾರ ಅಪರಾಹ್ನ 3 ಗಂಟೆಗೆ ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.
ಈ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲಾ ಮೊಹಲ್ಲಾಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಪ್ರತಿ ಮೊಹಲ್ಲಾಗಳಿಂದ ಸಾವಿರಾರು ಮಂದಿ ಆಗಮಿಸಲಿದ್ದಾರೆ. ಮುಸ್ಲಿಮರನ್ನು ದಮನಿಸುವ ದುರುದ್ದೇಶದಿಂದ ಕೂಡಿದ ಈ ಕಾನೂನಿನ ವಿರುದ್ಧ ಹೋರಾಟದಲ್ಲಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕ ಪ್ರತಿಭಟನಾಕಾರರು ಸಂಗಮಿಸುವ ನಿರೀಕ್ಷೆಯಿದೆ.
2020ರ ಆರಂಭದಲ್ಲಿ ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿಸಿ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಬೃಹತ್ ಹೋರಾಟ ನಡೆದಿತ್ತು. ಅಂದಿನ ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈಗ ಅದೇ ಶಾ ಗಾರ್ಡನ್ ಮೈದಾನವು ಎನ್ ಆರ್ ಸಿ ಹೋರಾಟವನ್ನೂ ಮೀರಿಸುವ ದೊಡ್ಡ ಮಟ್ಟದ ಮತ್ತೊಂದು ಹೋರಾಟಕ್ಕೆ ಸಜ್ಜುಗೊಂಡಿದೆ.
ಶಾಂತಿಯುತ ಹೋರಾಟ ಮೂಲಕ ಕೇಂದ್ರ ಸರ್ಕಾರಕ್ಕೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ನಮ್ಮ ಧ್ವನಿಯನ್ನು ಮುಟ್ಟಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಪ್ರಚೋದನಕಾರಿ ಪೋಸ್ಟರ್ ಗಳು, ಬ್ಯಾನರ್‌ಗಳು ಹಾಗೂ ಘೋಷಣೆಗಳಿಗೆ ಅವಕಾಶವಿಲ್ಲ ಎಂದು ಕೋರ್ಡಿನೇಷನ್ ಸಮಿತಿಯು ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಸೂಚನೆ ನೀಡಿದೆ .
ಪ್ರತಿಭಟನೆಗೆ ಹಾಜರಾಗುವ ವಾಹನ ಚಾಲಕ-ಮಾಲಕರ ಗಮನಕ್ಕೆ
- ಪಂಪ್ವೆಲ್ ಮೂಲಕ ಅಡ್ಯಾರ್ ಷಾ -ಗಾರ್ಡನ್ ಮೈದಾನಕ್ಕೆ ತಲುಪುವವರು, ಅಡ್ಯಾರ್ ಚೆಕ್ ಪೋಸ್ಟ್‌ನಿಂದ ಅಡ್ಯಾರ್‌ಕಟ್ಟೆಯ ವರೆಗೆ ಎಡಭಾಗಗಳಲ್ಲಿ ಸ್ವಯಂ ಸೇವಕರು ಮತ್ತು ಟ್ರಾಫಿಕ್ ಪೋಲೀಸರು ಸೂಚಿಸುವ ಮೈದಾನಗಳಲ್ಲಿ ಪಾರ್ಕ್ ಮಾಡತಕ್ಕದ್ದು.
- ವಿವಿಧ ಭಾಗದಿಂದ, ಬಿಸಿರೋಡ್ ಮೂಲಕ ತಲುಪುವವರು ಸಹ್ಯಾದ್ರಿ ಕಾಲೇಜ್‌ನಿಂದ ಅಡ್ಯಾರ್ ಚೆಕ್‌ಪೋಸ್ಟ್ ತನಕ ಎಡಭಾಗಗಳಲ್ಲಿ ಸ್ವಯಂ ಸೇವಕರು ಮತ್ತು ಟ್ರಾಫಿಕ್ ಪೋಲೀಸರು ಸೂಚಿಸುವ ಮೈದಾನದಲ್ಲಿ ಪಾರ್ಕ್ ಮಾಡತಕ್ಕದ್ದು.
- ಸಾಧ್ಯವಾದಷ್ಟು ದ್ವಿಚಕ್ರ ಸಹಿತ ವೈಯಕ್ತಿಕ ವಾಹನಗಳನ್ನು ಕಡಿಮೆಗೊಳಿಸಿ, ಸಂಘಟಿತರಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಯತ್ನಿಸಿ. ವಾಹನ ದಟ್ಟನೆ ಕಡಿಮೆಯಾಗಿಸಲು ಇದು ಬಹಳ ಉಪಕಾರಿಯಾಗಿದೆ.
ತಲಪಾಡಿ, ಉಳ್ಳಾಲ ಕಡೆಯಿಂದ ಆಗಮಿಸುವವರ ಗಮನಕ್ಕೆ
ನೇತ್ರಾವತಿ ಸೇತುವೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿರುವ ಕಾರಣ ಮುಡಿಪ್ಪು, ದೇರಳಕಟ್ಟೆ, ಕಿನ್ಯಾ, ಮಂಜನಾಡಿ, ತಲಪಾಡಿ, ಉಳ್ಳಾಲ, ತೊಕ್ಕೊಟ್ಟು ಮುಂತಾದ ಕಡೆಗಳಿಂದ ಲಘು/ ಖಾಸಗಿ ವಾಹನಗಳಲ್ಲಿ ಪ್ರತಿಭಟನೆಗೆ ಆಗಮಿಸುವವರು ಕೊಣಾಜೆ -ಹರೇಕಳ (ಬ್ರಿಡ್ಜ್) ಮೂಲಕ ಅಡ್ಯಾರ್ ತಲುಪಬೇಕಾಗಿದೆ.
ಮಂಗಳೂರು ಪೋಲೀಸ್ ಆಯುಕ್ತರ ಮಾಹಿತಿ
18ನೇ ತಾರೀಖು ಉಲಮಾ ಕೋರ್ಡಿನೇಷನ್ ಐತಿಹಾಸಿಕ ವಕ್ಫ್ ಸಂರಕ್ಷಣಾ ಪ್ರತಿಭಟನೆ ಮಂಗಳೂರು ಹೊರ ವಲಯದ ಅಡ್ಯಾರ್ ನಲ್ಲಿ ನಡೆಯುದರಿಂದ , ಕಾರ್ಯಕ್ರಮಕ್ಕೆ ಹಾಜರಾಗುವ ವಾಹನಗಳು ಹೊರತಾಗಿಸಿ ,ಪ್ರತಿಭಟನಾ ಸಮಾವೇಶ ಕಾರ್ಯಕ್ರಮದ ಅವಧಿಯಲ್ಲಿ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಹಾದು ಹೋಗುವ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ.
ಆದುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ದಿನಾಂಕ: 18-04-2025 ರಂದು ಮಧ್ಯಾಹ್ನ 12-00 ಗಂಟೆಯಿಂದ ರಾತ್ರಿ 21-00 ಗಂಟೆಯವರೆಗೆ ಪಡೀಲ್‌ನಿಂದ ಬಿ.ಸಿ.ರೋಡ್ ಕಡೆಗೆ ಹಾಗೂ ಬಿ.ಸಿ.ರೋಡ್ ಕಡೆಯಿಂದ ಪಡೀಲ್ ಕಡೆಗೆ ಬಾರದಂತೆ ನಿರ್ಭಂದಿಸಿದ್ದು, ತಮ್ಮ ಇಲಾಖೆಯ ಅಧೀನದಲ್ಲಿ ಬರುವ ನಗರದ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ಬರುವ ಹಾಗೂ ಹೊರಡುವ ಟ್ಯಾಂಕರ್ ಮತ್ತು ಇತರ ಘನ ಸರಕು ವಾಹನಗಳನ್ನು ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸಲು ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಲಾಗಿದೆ.
ಮೆಲ್ಕಾರು ಜಂಕ್ಷನ್- ಪುತ್ತೂರು/ಬಂಟ್ವಾಳ/ಬೆಳ್ತಂಗಡಿ ಕಡೆಯಿಂದ ಮಂಗಳೂರು ನಗರ ಮತ್ತು ಕಾಸರಗೋಡು ಕಡೆಗೆ ಬರುವ ವಾಹನಗಳು ಮೆಲ್ಕಾರ್ ಜಂಕ್ಷನ್, ಬೊಳೆಯಾರ್, ಮುಡಿಪು, ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಬಿ.ಸಿ. ರೋಡ್ ಪೊಳಲಿ ದ್ವಾರ-ಬಿ.ಸಿ.ರೋಡ್ ಕಡೆಯಿಂದ ಮಂಗಳೂರು/ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಪೊಳಲಿ ದ್ವಾರದ ಮೂಲಕ ಕಲ್ಪನೆ ಜಂಕ್ಷನ್ ನೀರುಮಾರ್ಗ ಬೈತುರ್ಲಿ ಕುಲಶೇಖರ – ನಂತೂರು ಮೂಲಕ ಸಂಚರಿಸುವುದು.
ವಳಚ್ಚಿಲ್ ಜಂಕ್ಷನ್-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ರಿಕ್ಷಾ/ಬೈಕ್) ವಳಚ್ಚಿಲ್‌ನಲ್ಲಿ ಬಲಕ್ಕೆ ತಿರುಗಿ ಮೇರ್ಲಪದವು ನೀರುಮಾರ್ಗ – ಬೈತುರ್ಲಿ – ನಂತೂರು ಮೂಲಕ ಸಂಚರಿಸುವುದು.
ಅಡ್ಯಾರ್ ಕಟ್ಟೆ-ಬಿ.ಸಿ.ರೋಡ್ / ತುಂಬೆ / ಫರಂಗಿಪೇಟೆ ಕಡೆಯಿಂದ ಮಂಗಳೂರು ನಗರದ ಕಡೆಗೆ ಸಂಚರಿಸುವ ಲಘು ವಾಹನಗಳು (ಕಾರು/ರಿಕ್ಷಾ/ಬೈಕ್) ಅಡ್ಯಾರ್ ಕಟ್ಟೆ ಬಳಿ ಎಡಕ್ಕೆ ತಿರುಗಿ ಹರೇಕಳ ಬ್ರಿಡ್ಜ್ ಕೊಣಾಜೆ – ದೇರಳಕಟ್ಟೆ – ತೊಕ್ಕೊಟ್ಟು ಮೂಲಕ ಸಂಚರಿಸುವುದು.
ಪಂಪ್‌ವೆಲ್ ಜಂಕ್ಷನ್- ಮಂಗಳೂರು ನಗರದ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು – ದೇರಳಕಟ್ಟೆ ಮುಡಿಪು ಬೊಳಿಯಾರ್ ಮೆಲ್ಕಾರ್ ಮೂಲಕ ಸಂಚರಿಸುವುದು.
ನಂತೂರು ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ ಕುಲಶೇಖರ ಬೈತುರ್ಲಿ ಜಂಕ್ಷನ್ ನೀರುಮಾರ್ಗ ಕಲ್ಪನೆ ಜಂಕ್ಷನ್-ಬಿ.ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಮೂಲಕ ಸಂಚರಿಸುವುದು.
ಕೆ.ಪಿ.ಟಿ. ವೃತ್ತ- ಮಂಗಳೂರು ನಗರ / ಸುರತ್ಕಲ್ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಪದವಿನಂಗಡಿ ಪಚ್ಚನಾಡಿ ವಾಮಂಜೂರು ಬೈತುರ್ಲಿ ಜಂಕ್ಷನ್ – ನೀರುಮಾರ್ಗ ಕಲ್ಪನೆ ಮೂಲಕ ಅಥವಾ ಬೋಂದೆಲ್ – ಕಾವೂರು ಬಜಪೆ ಕೈಕಂಬ – ಮೂಡಬಿದ್ರೆ ಮೂಲಕ ಸಂಚರಿಸುವುದು.
ಮುಲ್ಕಿ ವಿಜಯಸನ್ನಿಧಿ– ಉಡುಪಿ / ಮುಲ್ಕಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಿನ್ನಿಗೊಳಿ – ಮೂಡಬಿದ್ರೆ ಸಿದ್ದಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.
ಪಡುಬಿದ್ರೆ- ಉಡುಪಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಸಂಚರಿಸುವ ವಾಹನಗಳು ಕಾರ್ಕಳ – ಮೂಡಬಿದ್ರೆ ಸಿದ್ಧಕಟ್ಟೆ – ಬಂಟ್ವಾಳ ಮೂಲಕ ಸಂಚರಿಸುವುದು.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ವಿನಂತಿ.