janadhvani

Kannada Online News Paper

ಕೆಸಿಎಫ್ ಮನಾಮ ಸೆಕ್ಟರ್ ವತಿಯಿಂದ ನಡೆದ ಬೃಹತ್ ಇಫ್ತಾರ್ ಸಂಗಮ

ಮನಾಮ: ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ವತಿಯಿಂದ ದಿನಾಂಕ 28/03/2025 ಶುಕ್ರವಾರ ಕರ್ನಾಟಕ ಶೋಸಿಯಲ್ ಕ್ಲಬ್ ಸಭಾಂಗಣ ಮನಾಮದಲ್ಲಿ ಬೃಹತ್ ಇಫ್ತಾರ್ ಸಂಗಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಇಫ್ತಾರ್ ಸಂಗಮ ಸ್ವಾಗತ ಸಮಿತಿಯ ಚೇರ್ಮಾನ್ ಹನೀಫ್ ಮುಸ್ಲಿಯಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಮನಾಮ ಸೆಕ್ಟರ್ ಅಧ್ಯಕ್ಷರಾದ ಇಬ್ರಾಹೀಂ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಕೆಸಿಎಫ್’ನ ಕಾರ್ಯ ವೈಖರಿಗಳನ್ನು ಅಭಿನಂದಿಸಿ ಮಾತನಾಡಿ ಮನಾಮ ಸೆಕ್ಟರ್ ವತಿಯಿಂದ ಹಮ್ಮಿಕೊಂಡ ಇಫ್ತಾರ್ ಸಂಗಮವು ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಾಮಿಯಾ ಹಾಶಿಮಿಯಾ ಇಸ್ಲಾಮಿಯಾ ಇದರ ಮುದರ್ರಿಸ್ ಬಹು ಜಾಬಿರ್ ಅಲ್ ಖಾದ್ರಿ ಹಾಶಿಮಿ ನೂರಾನಿ ಪಿಲಿಕೂರು ಇಫ್ತಾರ್ ಸಂಗಮಕ್ಕೆ ಶುಭ ಹಾರೈಸಿದರು. ಬಹರೈನ್ ಕೆಸಿಎಫ್ ನಿಂದ ಅಂತರಾಷ್ಟ್ರೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಖಲಂದರ್ ಉಸ್ತಾದ್ ಕಕ್ಕೆಪದವು ಅವರನ್ನು ಸನ್ಮಾನಿಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಇಹ್ಸಾನ್ ವಿಭಾಗದ ಅಧ್ಯಕ್ಷರಾದ ನಝೀರ್ ಹಾಜಿ ದೇರಳಕಟ್ಟೆ, ಮನಾಮ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಬೇಂಗಿಲ, ಕೆಸಿಎಫ್ ಬುದೈಯ್ಯಾ ಸೆಕ್ಟರ್ ಅಧ್ಯಕ್ಷರಾದ ಹೈದರ್ ಸಅದಿ ಮಂಚಿ, ಡಿಕೆಯಸ್ಸಿ ಅಧ್ಯಕ್ಷರಾದ ಮಜೀದ್ ಸಅದಿ ಪೆರ್ಲ ಹಾಗೂ ಕರ್ನಾಟಕ ಶೋಸಿಯಲ್ ಕ್ಲಬ್ ಅಧ್ಯಕ್ಷ ಆನಂದ ಲೋಬೋ ಸ್ವಾಗತ್ ರೆಸ್ಟೋರೆಂಟ್ ಮಾಲಕ ಜಯಂತ್ ಕುಮಾರ್ ಶೆಟ್ಟಿ, ಅಬೂಬಕ್ಕರ್ ಮದನಿ ಉಸ್ತಾದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಆಝ್ ಉಜಿರೆ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ, ಝೋನಲ್, ಸೆಕ್ಟರುಗಳ ನಾಯಕರುಗಳು, ಮನಾಮ ಸೆಕ್ಟರ್ ನಾಯಕರಾದ ಅಶ್ರಫ್ ಕಿನ್ಯ, ಯೂಸುಫ್ ಬಜ್ಜಗೋಳಿ, ಕರೀಮ್ ಉಚ್ಚಿಲ,ಕಾಸಿಮ್ ಕೊಪ್ಪಲ,ಸಮದ್ ಮಾದಾಪುರ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಯಂಸೇವಕರ ನಾಯಕರಾದ ಸಮದ್ ಉಜಿರ್ಬೆಟ್ಟು ಸಭೆಯನ್ನು ನಿಯಂತ್ರಿಸಿದರು. ಅಹ್ಮದ್ ಮುಸ್ಲಿಯಾರ್ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.