ನವದೆಹಲಿ: ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದೆ. ಬಿಜೆಪಿ ಪರವಾಗಿ ಪ್ರಧಾನಿ ಮೋದಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಭಾನುವಾರ, ನಡೆದ ಚುನಾವಣಾ ಪ್ರಚಾರದಲ್ಲಿ ಮೋದಿ ಭಾಷಣ ಮಾಡುವಾಗ ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದು, ಮಾತನಾಡಲಾಗದೆ ಮೋದಿ ಕಕ್ಕಾಬಿಕ್ಕಿಯಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
दिल्ली में BJP की तरह मोदी जी का Teleprompter भी Fail हो गया…. pic.twitter.com/iqSsx0GZ4K
— AAP (@AamAadmiParty) January 5, 2025
ಮೋದಿ ಅವರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಟೆಲಿಪ್ರಾಂಪ್ಟರ್ ಹಾಕಿಕೊಂಡು, ಭಾಷಣ ಮಾಡುತ್ತಾರೆ ಎಂಬ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಈ ಹಿಂದೆಯೂ ಒಮ್ಮೆ ಭಾಷಣದ ವೇಳೆ ಟೆಲಿಪ್ರಾಮ್ನರ್ ಕೈಕೊಟ್ಟಿದ್ದರಿಂದ ಮೋದಿ ಅವರು ಮಾತನಾಡುವಾಗ ತಡಬಡಾಯಿಸಿದ್ದರು.
ಇದೀಗ, ಮತ್ತೆ ಅಂತದ್ದೇ ಘಟನೆ ನಡೆದಿದೆ. ಭಾನುವಾರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶ ಆಯೋಜಿಸಿತ್ತು. ಪ್ರಚಾರದಲ್ಲಿ ಭಾಗಿಯಾಗಿದ್ದ ಮೋದಿ ಅವರು ಅಬ್ಬರದ ಭಾಷಣ ಮಾಡಲು ಮುಂದಾಗಿದ್ದರು. ಈ ವೇಳೆ, ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದು, ಮೋದಿ ಅವರು ಭಾಷಣದ ಮಧ್ಯೆ ತಡವರಿಸಿದ್ದಾರೆ. ಭಾಷಣವನ್ನು ಸುಮಾರು 30 ಸೆಕೆಂಡ್‌ಗಳ ಕಾಲ ನಿಲ್ಲಿಸಿದ್ದು ಟೆಲಿಪ್ರಾಂಪ್ಟರ್ ಪುನರಾರಂಭವಾದ ಬಳಿಕ ಮತ್ತೆ ಭಾಷಣ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಧಾನಿ ಮೋದಿ ಅವರು ತಮ್ಮ ಭಾಷಣಗಳ ಸಮಯದಲ್ಲಿ ಟೆಲಿಪ್ರಾಂಪ್ಟರ್ಅನ್ನು ಬಳಸುತ್ತಾರೆ ಎಂಬ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. “ದೆಹಲಿಯಲ್ಲಿ ಬಿಜೆಪಿಯಂತೆ ಮೋದಿಜಿ ಅವರ ಟೆಲಿಪ್ರಾಂಪ್ಟರ್ ಕೂಡ ವಿಫಲವಾಗಿದೆ…” ಎಎಪಿ ಲೇವಡಿ ಮಾಡಿದೆ.
ಈ ಹಿಂದೆ, 2022ರ ಜನವರಿ 18ರಂದು world economy forum ಆಯೋಜಿಸಿದ್ದ ದಾವೂಸ್ ಅಜೆಂಡಾ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಿದ್ದರು. ಆ ವೇಳೆಯೂ ಶೃಂಗಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡುವಾಗ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು. ಆಗಲೂ ಭಾಷಣ ಮಾಡುವಾಗ ಮೋದಿ ತಬ್ಬಿಬ್ಬಾಗಿದ್ದರು.
ಆ ವೇಳೆ, ಮೋದಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದ ನೆಟ್ಟಿಗರು, ಪ್ರಧಾನ ಮಂತ್ರಿ ಮೋದಿಯವರು ಕೆಂಪು ಕೋಟೆಯಲ್ಲಿ ಭಾಷಣ ಮಾಡುವಾಗ ಅವರ ಸುತ್ತಲೂ ಕಾಣುವ ಗಾಜಿನ ಫಲಕವು ಬುಲೆಟ್ ಪ್ರೊಫ್ ಗ್ಲಾಸ್ ಎಂದು ಹಲವರು ಭಾವಿಸುತ್ತಾರೆ. ಆದರೆ, ಅದು ವಾಸ್ತವವಾಗಿ ಟೆಲಿಪ್ರಾಂಪ್ಟರ್ ಆಗಿದೆ. ಆ ಟೆಲಿಪ್ರಾಂಪ್ಟರ್ ಸಹಾಯದಿಂದ ಯಾವುದೇ ಸಮಸ್ಯೆಯಿಲ್ಲದೆ ಪ್ರಧಾನಿ ಭಾಷಣ ಮಾಡುತ್ತಾರೆ. ಅವರ ಭಾಷಣದ ವೇಗವನ್ನು ನಿರ್ವಾಹಕರು ನಿಯಂತ್ರಿಸುತ್ತಾರೆ. ಆದರೆ, ಆ ಟೆಲಿಪ್ರಾಂಪ್ಟರ್ ಕಾಣದಂತೆ ವಿಡಿಯೋಗ್ರಫರ್‌ಗಳು ಚಿತ್ರೀಕರಿಸುತ್ತಾರೆ” ಎಂದು ಆರೋಪಿಸಿದ್ದರು.
ಅದಾದ ಬಳಿಕ, 2022ರ ಆಗಸ್ಟ್ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಮೋದಿ ಅವರು ಟೆಲಿಪ್ರಾಂಪ್ಟರ್‌ಅನ್ನು ಬಳಸದೆ, ಭಾಷಣದ ಪ್ರಿಂಟ್‌ಔಟ್ ತೆಗೆದ ಪೇಪರ್ ಬಳಸಿಕೊಂಡು ಭಾಷಣ ಮಾಡಿದ್ದರು. ಇದೀಗ, ಮತ್ತೆ ಟೆಲಿಪ್ರಾಂಪ್ಟರ್ ಬಳಸಿದ್ದು, ಯಡವಟ್ಟು ಮಾಡಿಕೊಂಡಿದ್ದಾರೆ. ಮತ್ತೆ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ.