ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶವು ಬಹುತೇಕ ಪೂರ್ಣಗೊಂಡಿದ್ದು, ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ತಾವೇ ಪ್ರಭು ಎಂಬುದನ್ನು ದೇಶದ ಜನರು ಸಾಬೀತು ಮಾಡಿದ್ದಾರೆ. ಲೋಕಸಭೆ ಎಂಬ ಮಹಾ ಸಮರದಲ್ಲಿ ಪ್ರಜಾಪ್ರಭುತ್ವ ಅಂತಿಮ ನಗೆ ಬೀರಿದೆ.
ಯಾವುದೇ ಪಕ್ಷವು ಸ್ವತಂತ್ರವಾಗಿ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗದಂತೆ ಭಾರತೀಯ ಪ್ರಜ್ಞಾವಂತ ಪ್ರಜೆಗಳು, ಎಲ್ಲಾ ಪಕ್ಷಗಳು, ನಾಯಕರು, ಕಾರ್ಯಕರ್ತರು, ಟೀಕಾಕಾರರು ಸಮನಾಗಿ ಸಂತೋಷ ಮತ್ತು ದುಃಖದಲ್ಲಿ ಭಾಗಿಯಾಗುವಂತೆ ಟ್ರೀಟ್ ನೀಡಿದ್ದಾರೆ. ಅವರು NDA ಮೈತ್ರಿಗೆ ಸೋಲಿನಂತೆ ಭಾಸವಾಗುವ ಗೆಲುವಿನ್ನು ನೀಡಿದರೆ, INDIA ಮೈತ್ರಿಗೆ ಗೆಲುವಿನಂತೆ ಭಾಸವಾಗುವ ಸೋಲನ್ನು ನೀಡಿದ್ದಾರೆ.
ಬಿಜೆಪಿ ನೇತೃತ್ವದ NDA ಸರಳ ಬಹುಮತ ಪಡೆದಿದ್ದರೂ ಬಿಜೆಪಿಯ ಹಿನ್ನಡೆಯಿಂದಾಗಿ ತೊಳಲಾಡುತ್ತಿದೆ. ಕಾಂಗ್ರೆಸ್ ಮುಂದಾಳತ್ವದ INDIA ಒಕ್ಕೂಟ ಉತ್ತಮ ಪ್ರದರ್ಶನ ನೀಡಿದ್ದರೂ ಅಧಿಕಾರದ ಗದ್ದುಗೆ ಏರುವ ಕಸರತ್ತಿನಲ್ಲಿ ತೊಡಗಿದೆ. ಆದರೂ, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಕ್ಕಾಗಿ ಮತ್ತು ಬಿಜೆಪಿಯ ಅಹಂ ಅನ್ನು ಮುರಿದಿದ್ದಕ್ಕಾಗಿ ಇಂಡಿಯಾ ಒಕ್ಕೂಟ ಸಂತಸದಿಂದ ಬೀಗುತ್ತಿದೆ.
542 ಸ್ಥಾನಗಳ ಪೈಕಿ ಭಾರತೀಯ ಜನತಾ ಪಕ್ಷ ಹಾಗೂ ಮಿತ್ರ ಪಕ್ಷಗಳ ಮೈತ್ರಿ ಕೂಟ(NDA) ವು 292 ಸ್ಥಾನಗಳನ್ನು ಗಳಿಸುವ ಮೂಲಕ ಕಿರು ನಗೆಬೀರಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು (INDIA) 234 ಸ್ಥಾನಗಳನ್ನು ಗಿಟ್ಟಿಸಿ ಬಿಜೆಪಿ ಹಾಗೂ ಮೋದಿಯ ಸರ್ವಾಧಿಕಾರ ಧೋರಣೆಗೆ ಕಡಿವಾಣ ಹಾಕಿದ ಸಂತಸದಲ್ಲಿದೆ. ಉಳಿದಿರುವ 17 ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿದೆ.
ಜೆಡಿ(ಯು) ನಾಯಕ ನಿತಿಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ‘ಕಿಂಗ್ ಮೇಕರ್ಸ್’ ಆಗಿ ಮೆರೆದಾಡುತ್ತಿದ್ದಾರೆ. ಇವರಿಬ್ಬರು ಯಾವ ಪಕ್ಷ ಅಥವಾ ಒಕ್ಕೂಟ ಸೇರುತ್ತಾರೋ ಅವರಿಗೇ ಅಧಿಕಾರ. ಸದ್ಯಕ್ಕೆ, ನರೇಂದ್ರ ಮೋದಿ ಜೊತೆ ಕೈಕುಲುಕಿದ್ದ ಇವರಿಬ್ಬರೂ ರಾಹುಲ್ ಗಾಂಧಿ ಅವರೊಂದಿಗೆ ಕೈ ಜೋಡಿಸುವ ಸಾಧ್ಯತೆಯೂ ಇದೆ. ತಕ್ಕಡಿ ಎತ್ತ ಬೇಕಾದರೂ ತೂಗಬಹುದು. ರಾಜಕೀಯ ಅಂದರೆ ಅದೇ ಅಲ್ಲವೇ.
ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲ ಪ್ರಮುಖ ಪಕ್ಷಗಳು, ಆಯಾ ಪಕ್ಷಗಳ ನಾಯಕರು, ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ, ಪಟಾಕಿ ಸಿಡಿಸಿ ನಲಿದಾಡುತ್ತಿದ್ದಾರೆ, ಸಿಹಿಯನ್ನು ಹಂಚಿ ನಗೆಬೀರುತ್ತಿದ್ದಾರೆ, ಡೋಲು ಬಾರಿಸುತ್ತಿದ್ದಾರೆ, ಕುಣಿದಾಡುತ್ತಿದ್ದಾರೆ.
‘ಅಬ್ ಕಿ ಬಾರ್, ಚಾರ್ ಸೌ ಪಾರ್’ ಅನ್ನುತ್ತಿದ್ದ ನರೇಂದ್ರ ಮೋದಿಗೆ ಹೇಗಾಯಿತು ನೋಡು’ ಎಂದು ಬಿಜೆಪಿಯ ಮತ್ತು ಮೋದಿಯ ನಿಂದಕರು, ಅವರ ನೀತಿಗಳನ್ನು ವಿರೋಧಿಸುವವರು ತಮ್ಮ ಆಕ್ರೋಶದ ಬೆಂಕಿಯನ್ನು ಉಗುಳಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಹಾಗೆಯೆ, ರಾಹುಲ್ ಗಾಂಧಿಯನ್ನು ‘ಬಿಜೆಪಿಯ ಟ್ರಂಪ್ ಕಾರ್ಡ್’, ‘ಕೆಲಸಕ್ಕೆ ಬಾರದ ನಿರುದ್ಯೋಗಿ’ ಎಂದು ನಿಂದಿಸುತ್ತಿದ್ದ ಅವರ ಟೀಕಾಕಾರರು, ಅವರ ಭಾರತ್ ಜೋಡೋ ನ್ಯಾಯ ಯಾತ್ರಾದಿಂದ ಅವರು ಕಂಡುಕೊಂಡಿರುವ ಯಶಸ್ಸು, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಜೊತೆ ಸೇರಿ ಮಾಡಿರುವ ಕಮಾಲನ್ನು ನೋಡಿ ಬೆದರುಬೊಂಬೆಯಂತೆ ಅವಾಕ್ಕಾಗಿ ನಿಂತಿದ್ದಾರೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಪ್ಪತ್ತೆಂಟರಲ್ಲಿ ಇಪ್ಪತ್ತೈದು ಗೆದ್ದೇ ಗೆಲ್ಲುತ್ತೇವೆ ಎಂದು ‘ಮೋದಿ ಅಲೆ’ಯ ಮೇಲೆ ತೇಲುತ್ತ, ಮೇಲುತ್ತ ಅಸಲಿ ಪ್ರಚಾರದ ಪ್ರಾಮುಖ್ಯತೆಯನ್ನೇ ಮರೆತಿದ್ದ ಭಾರತೀಯ ಜನತಾ ಪಕ್ಷ ಹದಿನೇಳಕ್ಕಿಳಿದಿದ್ದರೂ, ಗ್ಯಾರಂಟಿಗಳ ಹರಿಕಾರ ಆಡಳಿತಾರೂಢ ಕಾಂಗ್ರೆಸ್ಸಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದಕ್ಕಾಗಿ ಕಮಲದಂತೆ ಮುಖ ಅರಳಿಸಿಕೊಂಡಿದೆ. ಅದೇ ಸಮಯದಲ್ಲಿ, ಗ್ಯಾರಂಟಿಗಳನ್ನು ನಂಬಿಕೊಂಡು ಇಪ್ಪತ್ತೊಂದು ಸ್ಥಾನ ಗೆಲ್ಲುತ್ತೇವೆ ಎಂದು ಎದೆತಟ್ಟಿ ಹೇಳುತ್ತಿದ್ದ ಕಾಂಗ್ರೆಸ್ ಎರಡಂಕಿ ಕೂಡ ದಾಟದೆ ಒಂಬತ್ತು ಒಂಬತ್ತು ಒಂಬತ್ತು ತೋಳು ಹಳ್ಳಕ್ಕೆ ಬಿತ್ತು ಎಂಬಂತಾಗಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಹದಿನೈದು ದಾಟುವ ಕನಸು ಕೂಡ ಕಾಣದ ಅಖಿಲೇಶ್ ಯಾದವ್ ಅವರು ಬಿಜೆಪಿಗಿಂತ ಹೆಚ್ಚು ಸ್ಥಾನ (38) ಗೆದ್ದು ಅಚ್ಚರಿಯಿಂದ ತಮ್ಮನ್ನೇ ತಾವು ಚಿಗುಟಿಕೊಂಡು ನೋಡುವಂತಾಗಿದೆ. ಕಳೆದ ಚುನಾವಣೆಯಲ್ಲಿ ಸೊನ್ನೆ ಸುತ್ತಿದ್ದ ಕಾಂಗ್ರೆಸ್ ಕೇವಲ 6 ಸೀಟು ಗೆದ್ದಿದ್ದರೂ ರಾಹುಲ್ ಗಾಂಧಿ ಅವರ ಗೆಲುವಿನಿಂದ ಮತ್ತು ಸ್ಮೃತಿ ಇರಾನಿ ಅವರನ್ನು ಆಘಾತಕಾರಿಯಾಗಿ ಸೋಲಿಸಿ ಕೇಕೇ ಹಾಕುತ್ತಿದೆ. ಉತ್ತರ ಪ್ರದೇಶದಲ್ಲಿ ಎಲ್ಲ 80 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಮುಸ್ಲಿಂ ಮತದಾರರು ಮರ್ಮಾಘಾತ ನೀಡಿದ್ದಾರೆ.
ಬಿಜೆಪಿಯ ಪ್ರಮುಖ ಚುನಾವಣಾ ಅಸ್ತ್ರವಾಗಿರುವ ಅಯೋಧ್ಯೆಯ ರಾಮಮಂದಿರ ಇರುವ ಉತ್ತರ ಪ್ರದೇಶದ ಫೈಝಾಬಾದ್ ಲೋಕಸಭೆ ಕ್ಷೇತ್ರದಲ್ಲೇ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ
ಹಲವು ವರ್ಷಗಳಿಂದ ಬಿಜೆಪಿ ರಾಮ ಮಂದಿರವನ್ನು ಚುನಾವಣಾ ಅಸ್ತ್ರವನ್ನಾಗಿಸಿದೆ. ಬಿಜೆಪಿ ಭರವಸೆ ಕೊಟ್ಟಂತೆ ವರ್ಷದ ಹಿಂದೆ ರಾಮ ಮಂದಿರ ನಿರ್ಮಾಣವೂ ಆಗಿದೆ. ಹಾಗಾಗಿ, ಇಡೀ ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ರಾಮ ಮಂದಿರ ಪ್ರಭಾವ ಬೀರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಮಮಂದಿರ ಇರುವ ಫೈಝಾಬಾದ್ ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ.ಇದೀಗ ಎಲ್ಲ ಭಾರತೀಯರ ಒಂದೇ ಪ್ರಶ್ನೆ, ಮುಂದಿನ ಪ್ರಧಾನಿ ಯಾರು?