ರಿಯಾದ್: ಸೌದಿ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಅವರ ಬಿಡುಗಡೆ ಪ್ರಕ್ರಿಯೆಗಾಗಿ ವಾರಸುದಾರರು ರಾಜಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಬಿಡುಗಡೆಯ ಅಂತಿಮ ಹಂತ ತಲುಪಿದೆ. ಇಂದು ಬೆಳಗ್ಗೆ ಎರಡೂ ಕಡೆಯವರು ಗವರ್ನರೇಟ್ ಕಚೇರಿಗೆ ಆಗಮಿಸಿ ಸಾಕ್ಷಿದಾರರಾಗಿ ಒಪ್ಪಂದಕ್ಕೆ ಸಹಿ ಹಾಕಿದರು. ಒಂದೂವರೆ ಮಿಲಿಯನ್ ಸೌದಿ ರಿಯಾಲ್‌ಗಳ ಚೆಕ್ ಅನ್ನು ಸಹ ಗವರ್ನರೇಟ್‌ಗೆ ಹಸ್ತಾಂತರಿಸಲಾಯಿತು. ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಗವರ್ನರೇಟ್, ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ರಹೀಮ್ ಬಿಡುಗಡೆ ಸಾಧ್ಯವಾಗಲಿದೆ.
ಇಂದು ಸಹಿ ಮಾಡಿದ ರಾಜಿ ಒಪ್ಪಂದ, ಚೆಕ್ ಸೇರಿದಂತೆ ದಾಖಲೆಗಳನ್ನು ಗವರ್ನರೇಟ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಿದೆ. ಅಷ್ಟರೊಳಗೆ ಎರಡೂ ಕಡೆಯ ವಕೀಲರು ನ್ಯಾಯಾಲಯದ ಸಮಯ ಕೇಳುವರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಸಿಟ್ಟಿಂಗ್ ಸಮಯವನ್ನು ನೀಡಲಿದೆ. ಕೋರ್ಟ್ ನೀಡಿದ ದಿನದಂದು ಗಲ್ಲು ಶಿಕ್ಷೆ ರದ್ದು, ಬಿಡುಗಡೆ ಸೇರಿದಂತೆ ತೀರ್ಪು ಬರುವ ನಿರೀಕ್ಷೆ ಇದೆ.
ಬಕ್ರೀದ್ ಹಬ್ಬ ಸಮೀಪಿಸುತ್ತಿರುವುದರಿಂದ ನ್ಯಾಯಾಲಯದಿಂದ ಶೀಘ್ರ ದಿನಾಂಕ ಸಿಕ್ಕರೆ ಮಾತ್ರ ಹಬ್ಬಕ್ಕೂ ಮುನ್ನ ಬಿಡುಗಡೆ ಸಾಧ್ಯ.ಇಲ್ಲವಾದಲ್ಲಿ ಹಬ್ಬದ ನಂತರ ಬಿಡುಗಡೆ ಆಗಲಿದೆ. ಹಣ ಹಸ್ತಾಂತರಿಸುವ ಮೂಲಕ ಪ್ರಕರಣದಲ್ಲಿನ ಪ್ರಮುಖ ಅಡಚಣೆಗಳು ತೆರವುಗೊಂಡಿದೆ. ಆದರೂ, ಬಿಡುಗಡೆಗಾಗಿ ಒಂದಷ್ಟು ದಿನ ಕಾಯಬೇಕು ಎಂಬುದು ಕಾನೂನು ನೆರವು ಸಮಿತಿಯ ಆಶಯ.