ನವದೆಹಲಿ: ಶುಕ್ರವಾರ ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಕೇಜ್ರಿವಾಲ್ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದು, ನಿಮ್ಮ ಮುಂದಿನ ಪ್ರಧಾನಿ ಯಾರು ಎಂದು ಬಿಜೆಪಿಗರನ್ನು ಕೇಳಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 2025ರ ನಂತರ ನರೇಂದ್ರ ಮೋದಿ ಅಲ್ಲ, ಅಮಿತ್ ಶಾ ದೇಶವನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದ ಕೇಜ್ರಿವಾಲ್ ಬಿಜೆಪಿ ಮತ್ತು ಮೋದಿ ಸರಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದು, ಸರ್ವಾಧಿಕಾರಿ’ ಮೋದಿ ‘ಒಂದು ರಾಷ್ಟ್ರ, ಒಂದು ನಾಯಕ’ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ, ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 2 ತಿಂಗಳಲ್ಲಿ ಯೋಗಿ ಆದಿತ್ಯನಾಥ್‌ನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿಗರು ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು? ಎಂದು ಇಂಡಿಯಾ ಮೈತ್ರಿಕೂಟವನ್ನು ಕೇಳುತ್ತಾರೆ, ನಾನು ಬಿಜೆಪಿಯವರನ್ನು ಕೇಳುತ್ತೇನೆ, ನಿಮ್ಮ ಪ್ರಧಾನಿ ಯಾರು? ಮೋದಿ ಮುಂದಿನ ಸೆಪ್ಟೆಂಬರ್‌ನಲ್ಲಿ 75 ವರ್ಷಗಳನ್ನು ಪೂರೈಸುತ್ತಿದ್ದಾರೆ. 75 ವರ್ಷ ತುಂಬಿದ ಪಕ್ಷದ ಸದಸ್ಯರು ನಿವೃತ್ತಿಯಾಗಬೇಕು ಎಂಬ ನಿಯಮ ರೂಪಿಸಿದವರು ಅವರೇ, ಮುಂದಿನ ವರ್ಷ ಅವರು ನಿವೃತ್ತಿಯಾಗಬೇಕಿದೆ. ಮೋದಿಯವರ ಭರವಸೆಗಳನ್ನು ಯಾರು ಪೂರೈಸುತ್ತಾರೆ? ಅಮಿತ್ ಶಾ ಮಾಡುತ್ತಾರಾ? ನೀವು ಮತ ಹಾಕಲು ಹೊರಟಾಗ, ನೀವು ಅಮಿತ್ ಶಾಗೆ ಮತ ಹಾಕುತ್ತಿದ್ದೀರಿ, ಮೋದಿಗೆ ಅಲ್ಲ ಎಂಬುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.
ಮೋದಿ ಅತ್ಯಂತ ಅಪಾಯಕಾರಿ ಯೋಜನೆಯನ್ನು ಹೊಂದಿದ್ದಾರೆ, ಅವರು ರಾಜ್ಯ ಚುನಾವಣೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಜೆಪಿಯ ಹಿರಿಯ ನಾಯಕರನ್ನು ಬದಿಗೆ ಸರಿಸುತ್ತಿದ್ದಾರೆ. ಮೋದಿ-ಒಂದು ರಾಷ್ಟ್ರ, ಒಂದು ನಾಯಕ-ಅಪಾಯಕಾರಿ ಯೋಜನೆಯನ್ನು ಹೊಂದಿದ್ದಾರೆ. ಅವರು ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ ಮತ್ತು ಎಲ್ಲಾ ಹಿರಿಯ ಬಿಜೆಪಿ ನಾಯಕರನ್ನು ಅಧಿಕಾರದಿಂದ ದೂರವಿಡುತ್ತಾರೆ, ವಸುಂಧರಾ ರಾಜೆ, ಶಿವರಾಜ್ ಚೌಹಾಣ್ ಅವರನ್ನು ನೋಡಿ..ಈಗ ಯೋಗಿ ಆದಿತ್ಯನಾಥ್ ಸರದಿ, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೋದಿ ಉತ್ತರಪ್ರದೇಶ ಮುಖ್ಯಮಂತ್ರಿಯನ್ನು ಬದಲಾಯಿಸುತ್ತಾರೆ.
ನಾನು ದೇಶದ 140 ಕೋಟಿ ಜನರಲ್ಲಿ ಭಿಕ್ಷೆ ಬೇಡಲು ಬಂದಿದ್ದೇನೆ. ಸರ್ವಾಧಿಕಾರದಿಂದ ನನ್ನ ದೇಶವನ್ನು ಉಳಿಸಿ, ಸುಪ್ರೀಂಕೋರ್ಟ್ ನನಗೆ 21 ದಿನಗಳನ್ನು ನೀಡಿದೆ. ಒಂದು ದಿನ 24 ಗಂಟೆಗಳು ಆದರೆ ನಾನು 36 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನನ್ನ ಸಂಪೂರ್ಣ ಜೀವ ನನ್ನ ದೇಶಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಗರು ನನ್ನನ್ನು ಜೈಲಿಗೆ ಕಳುಹಿಸಿದರು, ಪ್ರಧಾನಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಅವರು ತಮ್ಮ ಪಕ್ಷಕ್ಕೆ ಎಲ್ಲಾ ಭ್ರಷ್ಟರನ್ನು ಸ್ವಾಗತಿಸಿದ್ದಾರೆ, ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಅರವಿಂದ್ ಕೇಜ್ರಿವಾಲ್ ಅವರಿಂದ ಕಲಿಯಿರಿ. 2015ರಲ್ಲಿ ನಾವು ಸರ್ಕಾರ ರಚಿಸಿದಾಗ ನನ್ನ ಸಚಿವರೊಬ್ಬರು ಅಂಗಡಿಯವನಿಗೆ 5 ಲಕ್ಷ ರೂಪಾಯಿ ಕೇಳುತ್ತಿರುವ ಆಡಿಯೋವನ್ನು ಯಾರೋ ನನಗೆ ಕಳುಹಿಸಿದ್ದರು. ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಆದರೆ ನಾನು ಆ ಕೇಸ್‌ನ್ನು ಸಿಬಿಐಗೆ ಒಪ್ಪಿಸಿದೆ, ನೀವು ಏನು ಮಾಡಿದ್ದೀರಿ? ಪಕ್ಷಕ್ಕೆ ಎಲ್ಲಾ ಭ್ರಷ್ಟರನ್ನು ನೀವು ಸ್ವಾಗತಿಸುತ್ತೀರಿ ಮತ್ತು ನಿಮ್ಮನ್ನು ಭ್ರಷ್ಟಾಚಾರದ ವಿರುದ್ಧ ಹೋರಾಟಗಾರ ಎಂದು ಕರೆಯುವ ಧೈರ್ಯವಿದೆಯೇ? ನನ್ನನ್ನು ಬಂಧಿಸುವ ಮೂಲಕ ಬಿಜೆಪಿಯವರು ಯಾವುದೇ ಕೇಸು ಇಲ್ಲದಿದ್ದರೂ ಯಾರನ್ನು ಬೇಕಾದರೂ ಬಂಧಿಸಬಹುದು ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ಕೇಜ್ರವಾಲ್ ಹೇಳಿದ್ದಾರೆ.
ನನಗೆ ಹುದ್ದೆಗಳ ಮೇಲೆ ಪ್ರೀತಿ ಇಲ್ಲ, ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ 49 ದಿನಗಳಲ್ಲಿ ರಾಜೀನಾಮೆ ನೀಡಿದ್ದೆ, ನನ್ನನ್ನು ಬಂಧಿಸಿದಾಗ ನಾನೇಕೆ ರಾಜೀನಾಮೆ ನೀಡಲಿಲ್ಲ? ಎಎಪಿ ದೆಹಲಿಯನ್ನು ಅಭೂತಪೂರ್ವ ಅಂತರದಿಂದ ಗೆದ್ದಿದೆ. ಮುಂದಿನ 20 ವರ್ಷಗಳ ಕಾಲ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ. ನಾನು ರಾಜೀನಾಮೆ ನೀಡಿ ಎಎಪಿ ಸರ್ಕಾರ ಪತನವಾಗುವಂತೆ ಪಿತೂರಿ ನಡೆಸಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ ಮತ್ತು ಜೈಲಿನಿಂದ ಸರ್ಕಾರವನ್ನು ನಡೆಸುತ್ತೇನೆ ಎಂದು ಹೇಳಿದ್ದೇನೆ. ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಕೂಡ ರಾಜೀನಾಮೆ ನೀಡಬಾರದಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.