janadhvani

Kannada Online News Paper

ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ – ಕರ್ನಾಟಕ ಚಾಂಪಿಯನ್

ಇಪ್ಪತ್ತೈದು ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಆಂಧ್ರಪ್ರದೇಶ : ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವವು ಫೆ.16 17,18 ಮೂರು ದಿನಗಳಲ್ಲಿ ಆಂಧ್ರಪ್ರದೇಶದ ಗುಂಟಕಲ್ ಈದ್ಗಾ ಮೈದಾನದಲ್ಲಿ ನಡೆಯಿತು.

ಇಪ್ಪತ್ತೈದು ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೇರಳ ದ್ವಿತೀಯ ಹಾಗೂ ಜಮ್ಮು ಕಾಶ್ಮೀರ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಡಾ ಕುಮ್ ವೀರಭದ್ರಪ್ಪ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ನೌಶಾದ್ ಆಲಂ ಮಿಸ್ಬಾಹಿ ಒಡಿಸ್ಸಾ ಅಧ್ಯಕ್ಷತೆ ವಹಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್, ಡಾ ಫಾರೂಖ್ ನಈಮಿ ಕೊಲ್ಲಂ ಚಾಂಪಿಯನ್ ಟ್ರೋಫಿ ಹಸ್ತಾಂತರಿಸಿದರು. ಶಾಸಕ ವೆಂಕಟರಾಮನ್ ರೆಡ್ಡಿ ಉಪಸ್ಥಿತರಿದ್ದರು.

ಇದು ಐತಿಹಾಸಿಕ ವಿಜಯ! ಈ ವಿಜಯ ಮುಂದುವರಿಯಲಿ…

✍️ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ
(ರಾಜ್ಯಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ)

ಈ ಬಾರಿ ಗೆಲ್ಲಬೇಕೆಂದು ಪಣ ತೊಟ್ಟು ಹೊರಟಿದ್ದೆವು. ಗೆದ್ದು ಬಂದಿದ್ದೇವೆ. ಅಲ್ ಹಂದುಲಿಲ್ಲಾಹ್
ಈ ಕರುನಾಡು ಬಹಳಷ್ಟು ಪ್ರತಿಭಾವಂತರಿಗೆ ಜನ್ಮ ಕೊಟ್ಟ ಮಣ್ಣು. ಇಲ್ಲಿರುವಷ್ಟು ಪ್ರತಿಭೆಗಳು ಕೇರಳ ಬಿಡಿ ದೇಶದಲ್ಲಿ ಎಲ್ಲೂ ಇಲ್ಲ. ನಾವು ಇಳಿಯುವಂತೆ ಇಳಿದರೆ ಸಾಹಿತ್ಯೋತ್ಸವ ಮಾತ್ರವಲ್ಲ ಯಾವುದರಲ್ಲೂ ನಮಗೆ ಸಾಟಿ ಯಾರೂ ಇರಲಿಕ್ಕಿಲ್ಲ. ಆದರೆ ನಾವು ಇಳಿಯಬೇಕಷ್ಟೇ.
ನಮಗೊಂದು ಗುರಿ ಬೇಕು, ಆ ಗುರಿ ತಲುಪಲೇ ಬೇಕೆಂಬ ಛಲ ಬೇಕು, ಅದಕ್ಕಾಗಿ ಯಾವ ಪರಿಶ್ರಮಕ್ಕೂ ನಾವು ತಯಾರಿರಬೇಕು. ಯಶಸ್ವಿ ಕಟ್ಟಿಟ್ಟ ಬುತ್ತಿ.

ಈ ಬಾರಿ ನಮ್ಮ ಪ್ರತಿಭೆಗಳು ಚೆನ್ನಾಗಿ ತಯಾರಾಗಿದ್ದರು, ಸಾಹಿತ್ಯೋತ್ಸವ ಸಮಿತಿಯೂ ಸಾಕಷ್ಟು ಶ್ರಮ ವಹಿಸಿತ್ತು, ಯಾವುದೇ ಪ್ರತಿಭೆಗಳು ಮಿಸ್ ಆಗದಂತೆ ಪ್ರಧಾನ ಕಾರ್ಯದರ್ಶಿ ಸಹಿತ ಎಲ್ಲರೂ ನಿಗಾ ವಹಿಸಿದರು, ಮಂಗಳೂರು, ಬೆಂಗಳೂರು, ಕೊಡಗು , ಉತ್ತರ ಕರ್ನಾಟಕದ ಕಡೆಗಳಿಂದ ಪ್ರತಿಭೆಗಳನ್ನು ತಲುಪಿಸಲು ಬೇರೆ ಬೇರೆ ವ್ಯವಸ್ಥೆ ಮಾಡಿದ್ದೆವು. ಆದ್ದರಿಂದಲೇ ನಮಗೆ ನೂರು ಶೇಕಡಾ ಗ್ಯಾರಂಟಿ ಇತ್ತು ಈ ಬಾರಿ ನಾವೇ ಎಂದು.
ಇನ್ನು ಇದೇ ವರ್ಷದ ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಾಲ್ಕನೇ ಸಾಹಿತ್ಯೋತ್ಸವ ನಡೆಯಲಿದೆ. ಗೋಲ್ಡನ್ ಫಿಫ್ಟಿ ಪ್ರಯುಕ್ತ ಈ ಬಾರಿಯ ಸಾಹಿತ್ಯೋತ್ಸವ ಅಲ್ಪ ವಿಳಂಬವಾಗಿತ್ತು. ಆದ್ದರಿಂದ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿದ್ದರು. ಮುಂದೆ ಹಾಗಾಗದಿರಲು ಮುಂದಿನ ಸಾಹಿತ್ಯೋತ್ಸವ ಕೆಲವೇ ತಿಂಗಳಲ್ಲಿ ಆರಂಭಗೊಳ್ಳಲಿದೆ.

ಈ ಐತಿಹಾಸಿಕ ವಿಜಯ ನಮ್ಮ ಪ್ರತಿಭೆಗಳಿಗೆ ಪ್ರೇರಣೆ ಆಗಬೇಕು. ಈ ಬಾರಿ ನಮ್ಮ ವಿಜಯದ ಅಂತರ 50 ಅಂಕ! ಅಂದರೆ ಇದು ಗೋಲ್ಡನ್ ವಿಜಯ. ಮುಂದಿನ ಬಾರಿ ನಮ್ಮ ಅಂತರ ನೂರು ದಾಟಲೇ ಬೇಕು. ನಮ್ಮ ಪ್ರತಿಭೆಗಳಲ್ಲಿ ನಮಗೆ ಅಷ್ಟೊಂದು ನಂಬಿಕೆ ಇದೆ.
ಮುಂದಿನ ಬಾರಿ ಸುಲಭವಂತೂ ಇಲ್ಲ. ಕೇರಳಿಗರು ಗಾಯಗೊಂಡ ಹುಲಿ ಆಗಿದ್ದಾರೆ, ಎರಡು ಬಾರಿಯ ಚಾಂಪಿಯನ್ ಕಾಶ್ಮೀರಿಗಳು ಈ ಬಾರಿಯ ಸೋಲನ್ನು ಸಹಿಸಿರಲ್ಲ, ಇತರ ಜಿಲ್ಲೆಗಳೂ ಒಂದು ಕೈ ನೋಡಿಯೇ ಬಿಡೋಣ ಎಂದು ಬರುತ್ತಾರೆ. ಆದರೆ ನಮ್ಮ ಪ್ರತಿಭೆಗಳು ತಯಾರಾಗಿದ್ದರೆ ಮುಂದಿನ ಬಾರಿಯೂ ಗೆಲುವು ನಮ್ಮದೇ.

ಈ ಬಾರಿ ಆಂಧ್ರದಲ್ಲಿ ಕನ್ನಡದ ಪತಾಕೆ ಹಾರಿಸಿದ ಕರುನಾಡ ಮಣ್ಣಿನ ಹೆಮ್ಮೆಯ ಪ್ರತಿಭೆಗಳಿಗೆ, ಶ್ರಮಿಸಿದ ರಾಜ್ಯ, ಜಿಲ್ಲಾ , ಡಿವಿಷನ್, ಸೆಕ್ಟರ್ ಹಾಗೂ ಯೂನಿಟ್ ನಾಯಕರಿಗೆ, ಕಾರ್ಯಕರ್ತರಿಗೆ ಹೃದಯ ತುಂಬಿದ ಅಭಿನಂದನೆಗಳು.
ಮಕ್ಕಳೇ, ಎಸ್ಸೆಸ್ಸೆಫ್ ನಿಮಗೆ ರಾಷ್ಟ್ರ ಮಟ್ಟದಲ್ಲಿ ವೇದಿಕೆ ನೀಡಿದೆ. ನಿಮ್ಮ ಪ್ರತಿಭೆಗೆ ಮನ್ನಣೆ ನೀಡಿದೆ. ಇದು ಕೇವಲ ಸಾಹಿತ್ಯೋತ್ಸವದ ವೇದಿಕೆಗೆ ಸೀಮಿತವಾಗದಿರಲಿ. ನಿಮ್ಮ ಸಮಯ, ಸಾಮರ್ಥ್ಯ ಈ ಸಂಘಟನೆಗೆ ನೀಡಿ. ನಿಮ್ಮಂಥಹಾ ನೂರಾರು ಪ್ರತಿಭೆಗಳಿಗೆ ವೇದಿಕೆ ಕಟ್ಟಿಕೊಟ್ಟು ಬೆಳೆಸಿ, ಜೊತೆಗೆ ನೀವೂ ಬೆಳೆಯಿರಿ. ಕರುನಾಡ ಮಣ್ಣಿನ ಕಣಕಣದಲ್ಲೂ ಎಸ್ಸೆಸ್ಸೆಫ್ ಝಿಂದಾಬಾದ್ ಮಾರ್ದನಿಸಲಿ.

ಎಸ್ಸೆಸ್ಸೆಫ್ ಝಿಂದಾಬಾದ್
ಸಾಹಿತ್ಯೋತ್ಸವ ಝಿಂದಾಬಾದ್
ಟೀಂ ಕರ್ನಾಟಕ ಝಿಂದಾಬಾದ್

error: Content is protected !! Not allowed copy content from janadhvani.com