ರಿಯಾದ್: ಮಕ್ಕಾದಲ್ಲಿರುವ ಪವಿತ್ರ ಕಅಬಾದ ಒಳಭಾಗದಲ್ಲಿ ದುರಸ್ತಿ ಕಾರ್ಯ ಆರಂಭವಾಗಿದೆ. ಕಅಬಾದ ಸುತ್ತಲೂ ನವೀಕರಣ ಕಾರ್ಯವು ಸಂಪೂರ್ಣವಾಗಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ನಿರ್ಮಾಣ ಕಾರ್ಯ ಮುಂದುವರಿಯಲಿದೆ.
ಪವಿತ್ರ ಕಅಬಾದ ದುರಸ್ತಿ ಕಾರ್ಯವು ಮುಂಜಾನೆಯಿಂದಲೇ ಪ್ರಾರಂಭಗೊಳ್ಳುತ್ತದೆ. ಒಳಗೆ ಕಾಣದಷ್ಟು ಎತ್ತರದಲ್ಲಿ ಪರದೆಯನ್ನು ಕಟ್ಟಿ ಕಅಬಾದ ಸುತ್ತಲೂ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಅಬಾದ ಉತ್ತರ ಭಾಗದಲ್ಲಿರುವ ಹಿಜ್ರ್ ಇಸ್ಮಾಯಿಲ್ ಅನ್ನು ಸಹ ಪರದೆಯಿಂದ ಮುಚ್ಚಲಾಗಿದೆ. ಇಲ್ಲಿ ಹೆಚ್ಚಿನ ದುರಸ್ತಿ ಕಾರ್ಯ ನಡೆಯುತ್ತಿದೆ.
ಪ್ರಸ್ತುತ, ಕಅಬಾವನ್ನು ಮುಟ್ಟುವುದು, ಹಜರ್ ಅಲ್-ಅಸ್-ವದ್ ನ್ನು ವೀಕ್ಷಿಸಲು ಅಥವಾ ಅದನ್ನು ಚುಂಬಿಸುವುದು ಸಾಧ್ಯವಿಲ್ಲ, ಏಕೆಂದರೆ ಕಅಬಾವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದಾಗ್ಯೂ, ವಿಶ್ವಾಸಿಗಳು ತವಾಫ್ ಅಥವಾ ಕಅಬಾದ ಪ್ರದಕ್ಷಿಣೆ ಮತ್ತು ನಮಾಜ್ ಸೇರಿದಂತೆ ಇತರ ಪ್ರಾರ್ಥನಾ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಬಹುದು.
ವಿಶ್ವಾಸಿಗಳಿಗೆ ಕಅಬಾದ ಬಾಗಿಲಿನ ಮೇಲ್ಭಾಗವನ್ನು ಕಾಣಬಹುದು .ಮುಚ್ಚಲ್ಪಟ್ಟ ಭಾಗಗಳಿಗೆ ಅಧಿಕೃತ ಕೆಲಸಗಾರರಿಗೆ ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ. ಸೌದಿ ದೊರೆ, ರಾಜ ಸಲ್ಮಾನ್ ಮತ್ತು ಕ್ರೌನ್ ಪ್ರಿನ್ಸ್ ಅವರ ವಿಶೇಷ ಸೂಚನೆಗಳ ಮೇರೆಗೆ ಹಣಕಾಸು ಸಚಿವಾಲಯ ಮತ್ತು ಇತರ ಸರ್ಕಾರಿ ಏಜೆನ್ಸಿಗಳ ಮೇಲ್ವಿಚಾರಣೆಯಲ್ಲಿ ಕಅಬಾದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.