ದೋಹಾ: ಗಾಝಾದಲ್ಲಿ ಶಾಂತಿ ಮಾತುಕತೆಗಳು ಸಂಕಷ್ಟಗಳಿಂದ ಕೂಡಿವೆ ಎಂದು ಕತಾರ್ ಹೇಳಿದೆ. ಇಸ್ರೇಲ್ ಅನ್ನು ಸಮನ್ವಯದ ಹಾದಿಗೆ ತರುವುದು ಅತ್ಯಂತ ಕಷ್ಟಕರವಾದ ವಿಷಯವಾಗಿತ್ತು. ಗಾಝಾದಲ್ಲಿ ಎಷ್ಟು ಮಂದಿ ಒತ್ತೆಯಾಳುಗಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಾಜಿದ್ ಅಲ್ ಅನ್ಸಾರಿ ಹೇಳಿದ್ದಾರೆ.
ಹಿಂದಿನ ಒಪ್ಪಂದದ ನಿಯಮಗಳ ಪ್ರಕಾರದಲ್ಲೇ, ಕದನ ವಿರಾಮವನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ. ಆದಾಗ್ಯೂ, ಹಮಾಸ್ ಎಷ್ಟು ಒತ್ತೆಯಾಳುಗಳನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಬಿಡುಗಡೆಯಾದ ಒತ್ತೆಯಾಳುಗಳ ಸಂಖ್ಯೆಯ ಬಗ್ಗೆ ಮಾತ್ರ ಕತಾರ್ ಮಾಹಿತಿ ಹೊಂದಿದೆ ಎಂದು ಮಾಜಿದ್ ಅಲ್ ಅನ್ಸಾರಿ ಹೇಳಿದ್ದಾರೆ.
ಎರಡೂ ಕಡೆಯವರು ತಮ್ಮದೇ ಆದ ಅಗತ್ಯತೆಗಳನ್ನು ಮತ್ತು ಪರಿಗಣನೆಗಳನ್ನು ಹೊಂದಿದ್ದಾರೆ. ಹಾಗಾಗಿ ಮಾತುಕತೆ ಕಠಿಣವಾಗಿತ್ತು. ಕಠಿಣವಾದ ಭಾಗವೆಂದರೆ ಇಸ್ರೇಲ್ ಅನ್ನು ಸಮನ್ವಯಗೊಳಿಸುವುದಾಗಿತ್ತು.
ಗಾಝಾ ಮತ್ತು ವೆಸ್ಟ್ ಬ್ಯಾಂಕ್ ನಲ್ಲಿ ನಿರಂತರ ಸಣ್ಣ ಪ್ರಮಾಣದ ದಾಳಿಗಳು ನಡೆಯುತ್ತಿರುವ ಬಗ್ಗೆ ಗಮನಿಸಲಾಗಿದೆ. ಇದು ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಾಜಿದ್ ಅಲ್ ಅನ್ಸಾರಿ ಹೇಳಿದರು.
ಪ್ರಸ್ತುತ ಮಹಿಳೆಯರು ಮತ್ತು ಮಕ್ಕಳನ್ನು ಮುಕ್ತಗೊಳಿಸುವುದು ಮೊದಲ ಆದ್ಯತೆಯಾಗಿದೆ, ಸೈನಿಕರ ಬಿಡುಗಡೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಕದನ ವಿರಾಮವನ್ನು ವಿಸ್ತರಿಸಬೇಕಾದರೆ, ಹಮಾಸ್ ದಿನಕ್ಕೆ 10 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿರಬೇಕು. ಗಾಝಾದಲ್ಲಿ ಒತ್ತೆಯಾಳುಗಳ ವಿನಿಮಯ ಮತ್ತು ಒತ್ತೆಯಾಳುಗಳನ್ನು ತಲುಪಿಸುವುದು ಬಹಳ ಕಷ್ಟಕರವಾದ ಸಂಗತಿಯಾಗಿದೆ ಎಂದು ಮಾಜಿದ್ ಅಲ್-ಅನ್ಸಾರಿ ಹೇಳಿದರು.