ಕೊಲ್ಲಂ:ಆರು ವರ್ಷ ಪ್ರಾಯದ ಅಬಿಗೇಲ್ ಸಾರಾ ರೇಜಿ ಪತ್ತೆ. ಆರೋಪಿಗಳು ಮಗುವನ್ನು ಕೊಲ್ಲಂನ ಆಶ್ರಮದ ಮೈದಾನದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಆರೋಪಿ ಪರಾರಿಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇಂದು ಮಧ್ಯಾಹ್ನ 1:30ರ ಸುಮಾರಿಗೆ ಕೊಲ್ಲಂ ಆಶ್ರಮದ ಮೈದಾನದಲ್ಲಿ, ಸ್ಥಳೀಯರಿಗೆ ಮಗು ಪತ್ತೆಯಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ಮಗು ಅಬಿಗೇಲ್ ಎಂದು ಖಚಿತಪಡಿಸಿದರು. ಮಗುವಿನ ಮರಳಿಕೆಗೆ ಕುಟುಂಬಸ್ಥರು, ಸಂಬಂಧಿಕರು, ಸ್ಥಳೀಯರು ಸಂತಸ ವ್ಯಕ್ತಪಡಿಸಿದರು. ಬಳಿಕ ಮನೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪೊಲೀಸರು ಮಗುವನ್ನು ಕೊಲ್ಲಂ ಕಮಿಷನರ್ ಕಚೇರಿಗೆ ಕರೆದೊಯ್ಯಲಿದ್ದಾರೆ. ಸದ್ಯ ಮಗು ಕೊಲ್ಲಂ ಪೂರ್ವ ಪೊಲೀಸ್ ವಶದಲ್ಲಿದೆ. ಮಗು ಅಸ್ವಸ್ಥಗೊಂಡಿದ್ದು,ಪೊಲೀಸರು ಮಗುವಿಗೆ ಬಿಸ್ಕೆಟ್ ಮತ್ತು ನೀರು ನೀಡಿದರು. ಮಗುವಿನ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವರದಿಯಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಇಂದು ಸಂಜೆಯೊಳಗೆ ಮಗುವನ್ನು ಪೋಷಕರ ಕೈಗೆ ಒಪ್ಪಿಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದಾದ್ಯಂತ ಗಂಟೆಗಟ್ಟಲೆ ಹುಡುಕಾಟ ನಡೆಸಿದ ಮಗುವನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಪೊಲೀಸರ ಗುಂಪು ಸ್ಥಳಕ್ಕೆ ತಲುಪಿದೆ. ಮಗುವಿಗಾಗಿ ರಾಜ್ಯಾದ್ಯಂತ ಹುಡುಕಾಟ ನಡೆಸಿದ್ದು, ಆರೋಪಿಗಳು ಮಗುವನ್ನು ಬಿಟ್ಟು ಹೋಗಲು ಪ್ರೇರಣೆಯಾಗಿದೆ. ಅಬಿಗೇಲ್ ತಮ್ಮ ಸ್ವಂತ ಮಗಳು ಎಂಬಂತೆ ರಾಜ್ಯದ ಜನರ ಒಗ್ಗಟ್ಟಿನ ಹುಡುಕಾಟವು ಈ ಯಶಸ್ಸಿಗೆ ಕಾರಣವಾಯಿತು.
20 ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಅಬಿಗೇಲ್ ಪತ್ತೆಯಾಗಿದ್ದಾಳೆ. ಇದರಿಂದ ಮಗುವಿನ ಮನೆಯವರು ನಿರಾಳರಾಗಿದ್ದಾರೆ. ಮಗು ನಾಪತ್ತೆಯಾದಾಗಿನಿಂದ ಅಳಲು ತೋಡಿಕೊಂಡಿದ್ದ ಪೋಷಕರು ಹಾಗೂ ಸಹೋದರ ಈಗ ಸಂತಸಗೊಂಡಿದ್ದಾರೆ. ಮಗುವನ್ನು ಕಂಡು ಸಂಬಂಧಿಕರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದರು.
ಓಯೂರು ನಿವಾಸಿ ರೇಜಿ ಎಂಬವರ ಪುತ್ರಿ ಆರು ವರ್ಷದ ಅಭಿಗೇಲ್ ಸಾರಾ ರೇಜಿಯನ್ನು ಅಪಹರಿಸಲಾಗಿತ್ತು. ಓಯೂರು ಕಾಟತಿಮುಕ್ ಎಂಬಲ್ಲಿ ಕಾರಿನಲ್ಲಿ ಬಂದಿದ್ದ ಜನರ ಗುಂಪೊಂದು, ಬಿಳಿ ಬಣ್ಣದ ಹೊಂಡಾ ಅಮೇಜ್ ಕಾರಿನಲ್ಲಿ ಮಗುವನ್ನು ಅಪಹರಿಸಿದ್ದರು. ಹಿರಿಯ ಮಗ ಜೊನಾಥನ್ ಜೊತೆ ಟ್ಯೂಷನ್ ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದೂರಿನ ಆಧಾರದ ಮೇಲೆ ಪೂಯಪಲ್ಲಿ ಪೊಲೀಸರು ತನಿಖೆ ಆರಂಭಿಸಿ,ರಾಜ್ಯಾದ್ಯಂತ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಕಾರಿನಲ್ಲಿ ನಾಲ್ಕು ಜನರಿದ್ದರು ಎಂದು ಬಾಲಕಿಯ ಸಹೋದರ ಹೇಳಿದ್ದಾನೆ. ಕಾರಿನಲ್ಲಿ ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಇದ್ದರು. ತಾಯಿಗೆ ಪೇಪರ್ ಕೊಡುತ್ತೀರಾ ಎಂದು ಕಾರಿನಲ್ಲಿದ್ದವರು ಕೇಳಿದರು ಎಂದು ಸಹೋದರ ಹೇಳಿದನು. ಬಳಿಕ ಬಾಲಕಿಯನ್ನು ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ನಿಲ್ಲಿಸಲು ಯತ್ನಿಸಿದಾಗ ಕಾರು ಏಕಾಏಕಿ ಮುಂದೆ ಸಾಗಿದ್ದು, ಸಹೋದರ ಕೆಳಗೆ ಬಿದ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರು ಪತ್ತೆಯಾಗಿದೆ.
ಏತನ್ಮಧ್ಯೆ ಅಜ್ಞಾತ ಫೋನ್ ಕರೆಗಳು ಮಗುವಿನ ಕುಟುಂಬಸ್ಥರಿಗೆ ಬಂದಿದ್ದು,ಮಗುವಿನ ಬಿಡುಗಡೆಗಾಗಿ 5 ಲಕ್ಷ ರೂ ನೀಡುವಂತೆ ಬೇಡಿಕೆ ಇಟ್ಟಿದ್ದು, ಮತ್ತೆ ರಾತ್ರಿ ಕರೆ ಮಾಡಿದ ಮಹಿಳೆಯೋರ್ವಳು 10 ಲಕ್ಷ ರೂ ನೀಡಿದರೆ ಬೆಳಿಗ್ಗೆ 10 ಗಂಟೆಗೆ ಮಗುವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾಳೆ.
ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಪಹರಣಕಾರರು ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ.