ಉಡುಪಿ, ನ.14: ಮಹತ್ವದ ಪ್ರಗತಿಯೊಂದರಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಯನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬೆಳಗಾವಿಯ ಕುಡುಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಈತ ಮಂಗಳೂರು ಏರ್ ಏರ್ಪೋರ್ಟ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್ ಪಿಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ. ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಎರಡು ದಿನಗಳಿಂದ ಈತನ ಬೆನ್ನು ಬಿದ್ದಿದ್ದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದನು. ಇಂದು ಮಧ್ಯಾಹ್ನ ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ಇಲ್ಲವೇ ಆಂಧ್ರಕ್ಕೆ ತೆರಳಲು ಹಂತಕ ಪ್ಲ್ಯಾನ್ ಮಾಡಿಕೊಂಡಿದ್ದನು.ಕೊಲೆ ಮಾಡಿ ಊರೂರು ಸುತ್ತಾಡುತ್ತಿದ್ದ ಮಧ್ಯೆ ಸಿಕ್ಕಿಬಿದ್ದ ಆರೋಪಿಯನ್ನು ಬಂಧಿಸಿ ಉಡುಪಿಗೆ ಕರೆತರಲಾಗುತ್ತಿದೆ.
ಉಡುಪಿ ಜಿಲ್ಲೆ ಮಲ್ಪೆ ಠಾಣಾ ವ್ಯಾಪ್ತಿಯ ತೃಪ್ತಿನಗರದಲ್ಲಿ ಕಳೆದ ಭಾನುವಾರ ಬೆಳಿಗ್ಗೆ ಈ ಘೋರ ಕೃತ್ಯ ನಡೆದಿದೆ. ಮನೆಯ ಯಜಮಾನಿ ಹಸೀನಾ(46) ಮಕ್ಕಳಾದ ಅಫ್ನಾನ್(23), ಅಯ್ನಾಝ್(21) ಹಾಗೂ ಆಸಿಂ(12) ಎಂಬುವರನ್ನ ದುಷ್ಕರ್ಮಿ ಚೂರಿಯಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಒಂದೇ ಘಟನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನ ಕೊಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಯ ಹಿಂದೆ ವಿವಿಧ ಆಯಾಮಗಳ ಅನುಮಾನವನ್ನು ವ್ಯಕ್ತಪಡಿಸಿ ಕೊಲೆ ಪಾತಕಿಯ ಶೋಧಕ್ಕೆ ಮುಂದಾಗಿದ್ದರು.
ನವೆಂಬರ್ 14, ಮಂಗಳವಾರ ಬೆಳಿಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಂತ್ರಸ್ತ ಕುಟುಂಬದ ಮುಖ್ಯಸ್ಥ ನೂರ್ ಮೊಹಮ್ಮದ್ ಅವರೊಂದಿಗೆ ಖುದ್ದಾಗಿ ಮಾತನಾಡಿ, ಶೀಘ್ರ ಬಂಧಿಸುವ ಭರವಸೆ ನೀಡಿದರು.