janadhvani

Kannada Online News Paper

ಚುನಾವಣಾ ಫಲಿತಾಂಶವನ್ನು ಬೂತ್ ಮಟ್ಟದಲ್ಲಿ ವಿಂಗಡಿಸದಂತೆ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ‘ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಆಯಾ ಕ್ಷೇತ್ರಗಳ ಪ್ರತಿಯೊಬ್ಬ ಅಭ್ಯರ್ಥಿಯ ಫಲಿತಾಂಶವನ್ನು ಬೂತ್ ಮಟ್ಟದಲ್ಲಿ ವಿಂಗಡಣೆ ಮಾಡುವುದನ್ನು ನಿಲ್ಲಿಸುಬೇಕು’ ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹಾಗೂ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೃಷಿಕ ಶಿವರಾಂ ಗೋಪಾಲಕೃಷ್ಣ ಗಾಂವಕರ್ ಎಂಬುವರು ಸಲ್ಲಿಸಿರುವ ಪಿಐಎಲ್ ಅನ್ನು  ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಸುನಿಲ್ ಕುಮಾರ್, ‘ಬೂತ್ ಮಟ್ಟದಲ್ಲಿ ಪ್ರತಿ ಅಭ್ಯರ್ಥಿಯ ಫಲಿತಾಂಶ ಪ್ರಕಟಿಸುವುದರಿಂದ ಕಡಿಮೆ ಮತಗಳು ಬಂದ ಪ್ರದೇಶದ ಅಭಿವೃದ್ಧಿಗೆ ಜನ ಪ್ರತಿನಿಧಿಗಳು ಲಕ್ಷ್ಯ ಕೊಡುವುದಿಲ್ಲ’ ಎಂದರು.

‘ಈ ರೀತಿ ಕಡಿಮೆ ಮತ ಪಡೆದ ಪ್ರದೇಶಗಳನ್ನು ಚುನಾವಣೆಯಲ್ಲಿ ಆರಿಸಿ ಬಂದವರು ನಿರ್ಲಕ್ಷಿಸುತ್ತಾರೆ. ಅಲ್ಲಿನ ಜನರ ಕುಂದು ಕೊರತೆ ಆಲಿಸುವುದಿಲ್ಲ. ಅವರನ್ನು ಬೆದರಿಸುವ ಸಾಧ್ಯತೆಯೂ ಇರುತ್ತದೆ’ ಎಂದರು.

‘ಈ ರೀತಿ ಮಾಡುವುದು ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ವಿರುದ್ಧವಾಗಿದೆ’ ಎಂದೂ ವಾದ ಮಂಡಿಸಿದರು.

‘ಆದ್ದರಿಂದ, ಪ್ರತಿ ಕ್ಷೇತ್ರದ ಮತಗಳನ್ನು ಒಮ್ಮೆಲೇ ಒಂದೇ ಕಡೆ ಕ್ರೋಡೀಕರಿಸಿ ಒಟ್ಟಿಗೆ ಫಲಿತಾಂಶ ಪ್ರಕಟಿಸಬೇಕು. ಚುನಾವಣೆ ನಡೆಸುವ ನಿಯಮಗಳು-1961 ಕ್ಕೆ ತಿದ್ದುಪಡಿ ತರಬೇಕು. ಈ ದಿಸೆಯಲ್ಲಿ ರಾಷ್ಟ್ರೀಯ ಕಾನೂನು ಆಯೋಗವು 2015ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪರಿಗಣಿಸಿ ಅದನ್ನು ಜಾರಿಗೊಳಿಸಲು ನಿರ್ದೇಶಿಸಬೇಕು” ಎಂದು ಸುನಿಲ್ ಕುಮಾರ್ ನ್ಯಾಯಪೀಠಕ್ಕೆ ಮನವಿ ಮಾಡಿದರು.

ವಿಚಾರಣೆಯನ್ನು ರಜಾಕಾಲದ ನಂತರಕ್ಕೆ ಮುಂದೂಡಿದ ನ್ಯಾಯಪೀಠ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿ ಎ‌.ಎಸ್.ಬೋಪಣ್ಣ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿತು

error: Content is protected !! Not allowed copy content from janadhvani.com