janadhvani

Kannada Online News Paper

ಉತ್ತರ ಪ್ರದೇಶ: 13 ಸಾವಿರ ದಾಟಿದ ಡೆಂಗ್ಯೂ ಪ್ರಕರಣ- 24 ಕ್ಕೂ ಹೆಚ್ಚು ಮಂದಿ ಮೃತ್ಯು

ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳು ಅನಿಯಂತ್ರಿತವಾಗಿ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ.

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 13,000 ದಾಟಿದ್ದು ಲಕ್ನೋ, ಮೊರಾದಾಬಾದ್, ಮೀರತ್, ಕಾನ್ಪುರ ಮತ್ತು ನೋಯ್ಡಾ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಅಷ್ಟುಮಾತ್ರವಲ್ಲದೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 600 ಹೊಸ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಸ್ಥಳೀಯ ಆಸ್ಪತ್ರೆಗಳು ಅನೇಕ ಡೆಂಗ್ಯೂ ರೋಗಿಗಳನ್ನು ದಾಖಲಿಸಿಕೊಂಡಿವೆ ಮತ್ತು ಪ್ರತಿದಿನ ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿವೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಇದುವರೆಗೆ 24 ಕ್ಕೂ ಹೆಚ್ಚು ಮಂದಿ ಡೆಂಗ್ಯೂನಿಂದ ಮೃತಪಟ್ಟಿರುವುದಾಗಿ ವರದಿ ನೀಡಿದ್ದು ಆದರೆ ಖಾಸಗಿ ಆಸ್ಪತ್ರೆಗಳ ದತ್ತಾಂಶವನ್ನೂ ಸೇರಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಬ್ರಜೇಶ್ ಪಾಠಕ್ ಅವರು ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆಗಳನ್ನು ನೀಡಿದ್ದಾರೆ. ಇದಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸುವಂತೆ ಹೇಳಿಕೊಂಡಿದ್ದಾರೆ.

ಲಕ್ನೋದಲ್ಲಿರುವ ಆಸ್ಪತ್ರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಡೆಂಗ್ಯೂ ರೋಗಿಗಳಿಗೆ ಡಯಾಲಿಸಿಸ್ ಮತ್ತು ವೆಂಟಿಲೇಟರ್ ಬೆಂಬಲದ ಅಗತ್ಯವಿದೆ. ಪ್ರಮುಖ ಆಸ್ಪತ್ರೆಗಳ ಎಲ್ಲಾ ಹಾಸಿಗೆಗಳು ಡೆಂಗ್ಯೂ ರೋಗಿಗಳಿಂದ ತುಂಬಿವೆ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com