ಬೆಂಗಳೂರು: ಭಾರತ ಪ್ರತಿಯೊಬ್ಬ ಭಾರತೀಯರಿಗೂ ಸೇರಿದ್ದು. ನಮ್ಮ ನಾಡು ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಸೂಫಿ-ಸಂತರ ತಪಸ್ಸು ಮತ್ತು ಮೌಲ್ಯಗಳಿಂದ ರೂಪುಗೊಂಡಿದೆ.ಈ ದೇಶದ ಸಾರ್ವಭೌಮತೆಯನ್ನು ಮತ್ತು ಐಕ್ಯತೆಯನ್ನು ಕಾಪಾಡುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಕರೆ ನೀಡಿದರು.


ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ‘ಗೋಲ್ಡನ್ ಫಿಫ್ಟಿ’ ಸಮಾರೋಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಈ ರಾಜ್ಯದಲ್ಲಿ ಯಾವುದೇ ಧಾರ್ಮಿಕ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನಬದ್ದವಾದ ರಕ್ಷಣೆ ಇದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಅವರ ಭಾಷಣದ ಮಧ್ಯೆ ಮಳೆ ಸುರಿದಾಗಲೂ ಯಾವುದೇ ಗೌಜಿ ಗದ್ದಲವಿಲ್ಲದೆ ಬಹಳ ಶಿಸ್ತು ಮತ್ತು ಶಾಂತಿಯಿಂದ ಕುಳಿತ ವಿದ್ಯಾರ್ಥಿಗಳನ್ನು ಕಂಡ ಮುಖ್ಯಮಂತ್ರಿಯವರು ಆಶ್ಚರ್ಯ ವ್ಯಕ್ತಪಡಿಸಿ, ಸಂಘಟನೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಮುಖ್ಯ ಭಾಷಣ ನಡೆಸಿದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಉಸ್ತಾದರು ಮಾತನಾಡಿ, ಸಾಮೂಹಿಕ ಜೀವಿಗಳಾದ ಮನುಷ್ಯರು, ಸಮೂಹಕ್ಕಾಗಿ ಕಾರ್ಯಾಚರಿಸಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವ ಭಾರತದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಾದಾಡದೆ, ಎಲ್ಲರೂ ಪರಸ್ಪರ ಐಕ್ಯತೆಯಿಂತ ಬದುಕಬೇಕು. ಭಾರತ ಯಾವುದೇ ಒಂದು ಧರ್ಮೀಯರಿಗೆ ಸೀಮಿತವಲ್ಲ ಎಂದು ಅವರು ಹೇಳಿದರು.ಮನುಷ್ಯರೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕೆನ್ನುವ ಇಸ್ಲಾಮಿನ ಉದಾತ್ತವಾದ ಆಶಯವನ್ನಾಗಿದೆ ಎಸ್ಸೆಸ್ಸೆಫ್ ನ ವಿದ್ಯಾರ್ಥಿಗಳು ಮನುಕುಲಕ್ಕೆ ಸಾರುತ್ತಿರುವುದು. ಅದಲ್ಲದೇ, ಯಾವುದೇ ಸಂಕುಚಿತ ಮನೋಭಾವ ಬೆಳೆಸಿಕೊಂಡು ಮನುಷ್ಯರೆಡೆಯಲ್ಲಿ ಭಿನ್ನತೆಯನ್ನು ಸೃಷ್ಟಿಸಬಾರದು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕರೆ ನೀಡಿದರು.
ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಅಲ್ ಬುಖಾರಿ ಕೂರತ್ ತಂಙಳ್ ದುಆಕೆ ನೇತೃತ್ವ ನೀಡಿದರು.
ಯಾವುದೇ ಕಪ್ಪು ಚುಕ್ಕೆ ತರದೆ ಸಮುದಾಯದ ಗೌರವ ಹೆಚ್ಚಿಸಿದ ಎಸ್ಸೆಸ್ಸೆಫ್- ವಿಧಾನ ಸಭಾ ಸ್ಪೀಕರ್
ಸತತ 50 ವರ್ಷಗಳಲ್ಲಿ ಸಮುದಾಯದ ಗೌರವ ಹೆಚ್ಚಿಸಿದ ಎಸ್‌ಎಸ್‌ಎಫ್‌ಗೆ ಅಭಿನಂದನೆಗಳು. ಅತ್ಯಂತ ಗೌರವಿದೆ, ನಮ್ಮ ಸಮುದಾಯಕ್ಕೆ ಯಾವುದೇ ಕಪ್ಪು ಚುಕ್ಕೆ ತರದೆ ಪ್ರತಿಹಂತದಲ್ಲಿ ಸಮುದಾಯದ ಗೌರವ ಹೆಚ್ಚಿಸಿದೆ. ಮುಂದಿನ 50 ವರ್ಷಗಳಲ್ಲಿ ದೇಶದ ಸಂವಿಧಾನವನ್ನು ಎತ್ತಿಹಿಡಿದು ಸುಧಾರಣೆಗೊಳಿಸಿ. ಯಾವುದೇ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದೆ ಜಾತ್ಯತೀತ ತತ್ವಗಳ ನೆಲೆಯಲ್ಲಿ ಸಂವಿಧಾನ ಎತ್ತಿಹಿಡಿದು ಕೆಲಸ ಮಾಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಫರೀದ್ ಕರೆ ನೀಡಿದರು.


ನನ್ನ 45 ವರ್ಷದ ಇತಿಹಾಸದಲ್ಲಿ ಇಷ್ಟೊಂದು ಶಿಸ್ತುಬದ್ಧ ಸಂಘಟನೆಯನ್ನು ಕಂಡಿಲ್ಲ- ಡಿಸಿಎಂ
ಇಷ್ಟೊಂದು ಮಳೆ ಸುರಿದಾಗಲೂ ಜಗ್ಗದೇ ಕುಳಿತಿರುವ ವಿದ್ಯಾರ್ಥಿಗಳ ಶಿಸ್ತು ನನ್ನನ್ನು ಅಚ್ಚರಿ ಮೂಡಿಸಿದೆ. ಭಾರತದ ಸ್ವಾತಂತ್ರಕ್ಕಾಗಿ ನಮ್ಮ ಪೂರ್ವಿಕರು ಯಾವ ರೀತಿ ಹೋರಾಟ ನಡೆಸಿದ್ದರೋ, ಅದೇ ರೀತಿ ಭಾರತದಲ್ಲಿ ಶಾಂತಿ ನಿರ್ಮಾಣಕ್ಕಾಗಿ ಹೋರಾಡುತ್ತಿರುವ ಎಸ್ಸೆಸ್ಸೆಫ್ ವಿದ್ಯಾರ್ಥಿಗಳ ಸಂಘಟನೆಗೆ ನನ್ನ ಹಾಗೂ ಸರ್ಕಾರದ ಪೂರ್ಣ ಬೆಂಬಲವಿದೆ ಎಂದು ರಾಜ್ಯದ ಸನ್ಮಾನ್ಯ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ನಾನು ಕಾಂಗ್ರೆಸ್ ನಾಯಕನಾಗಿ , ಉಪಮುಖ್ಯಮಂತ್ರಿಯಾಗಿ ನಿಮ್ಮ ಕಾರ್ಯಕ್ರಮಕ್ಕೆ ಬಂದಿಲ್ಲ, 1985ರಿಂದ ವಿಧ್ಯಾರ್ಥಿ ಸಂಘಟನೆಯಲ್ಲಿ ಬೆಳೆದು ಬಂದವನು, ಆದ್ದರಿಂದ ನಿಮ್ಮನ್ನು ನೋಡಲು ಬಂದಿದ್ದೇನೆ, ಒಂದು ಹೇಳುತ್ತೇನೆ, ಬೆಳಿಗ್ಗೆಯಿಂದಲೇ ನಿಮ್ಮ ಕಾರ್ಯಕ್ರಮವನ್ನು ಗಮನಿಸುತ್ತಿದ್ದೇನೆ, 45ವರ್ಷದ ನನ್ನ ಸಾರ್ವಜನಿಕ ಬದುಕಿನಲ್ಲಿ ನಾನು ಎಸ್ ಎಸ್ ಎಫ್ ನಂತಹ ಒಂದು ಶಿಸ್ತಿನ ಸಂಘಟನೆಯನ್ನು ನೋಡಿಯೇ ಇಲ್ಲ ಎಂದು ಡಿಕೆಶಿವಕುಮಾರ್ ಹೇಳಿದರು.
ಕೇರಳದ ಸಂಸದ ಟಿ.ಎನ್. ಪ್ರತಾಪನ್, ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ತಂಙಳ್, ಡಾ. ಅಬ್ದುಲ್ ಹಕೀಂ ಅಝ್ಹರಿ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಂತಾದವರು ಮಾತನಾಡಿದರು.





ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಅಲ್ ಬುಖಾರಿ ಕೂರತ್, ಜೆಡಿಎಸ್ ಅಧ್ಯಕ್ಷ – ಸಿ.ಎಂ. ಇಬ್ರಾಹಿಂ ಮುಂತಾದ ರಾಜಕೀಯ ಮುಖಂಡರು ಹಾಗೂ ಉಲಮಾ, ಉಮರಾ ನಾಯಕರು, ಸಾಮಾಜಿಕ ಮತ್ತು ಶೈಕ್ಷಣಿಕ ಧುರೀಣರು ಬಾಗವಹಿಸಿದ್ದರು.








