janadhvani

Kannada Online News Paper

18ನೇ ಜಿ-20 ಶೃಂಗಸಭೆ ಆರಂಭ- ನಾಮಫಲಕದಲ್ಲಿ ಇಂಡಿಯಾ ಬದಲು “ಭಾರತ್” ಪ್ರದರ್ಶನ

ನವದೆಹಲಿ:18ನೇ ಜಿ-20 ಶೃಂಗಸಭೆಗೆ ದೆಹಲಿಯ ಭಾರತ ಮಂಟಪದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಜಾಗತಿಕ ನಾಯಕರನ್ನು ಸಭೆಗೆ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಮೊದಲ ಅಧಿವೇಶನ ಉದ್ದೇಶಿಸಿ ಮಾತನಾಡಿದರು. “ಭಾರತದ ಅಧ್ಯಕ್ಷತೆಯಲ್ಲಿ ಸೆ.9 ಮತ್ತು 10 ರಂದು ನಡೆಯುತ್ತಿರುವ ಜಿ-20 ಸಭೆಯು ಜಗತ್ತನ್ನು ಒಳಗೊಂಡು ನಡೆಯುತ್ತಿರುವ ಸಭೆಯಾಗಿದೆ. ಜಗತ್ತು ಒಗ್ಗೂಡುವ ಮೂಲಕ ಏಳಿಗೆ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು.

“ಭಾರತದಲ್ಲಿ ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ ಎಂಬ ಮಂತ್ರದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದೇ ಸೂತ್ರದಂತೆ ವಿಶ್ವವೂ ಮುನ್ನಡೆದರೆ ಮಾನವ ಏಳಿಗೆಯು ಸಾಧ್ಯವಾಗಲಿದೆ. ಹಾಗಾಗಿ, ಎಲ್ಲರೂ ಒಗ್ಗೂಡಿ ಮಾನವ ಕುಲವನ್ನು ಏಳಿಗೆಯತ್ತ, ಅಭಿವೃದ್ಧಿಯತ್ತ ಕೊಂಡೊಯ್ಯೋಣ. ಜಗತ್ತು ಒಂದಾದರೆ ಅಭಿವೃದ್ಧಿ, ಜಗತ್ತು ಒಂದಾದರೆ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ. ಇದೇ ಮನಸ್ಥಿತಿಯಲ್ಲಿ ನಾವು ಕೊರೊನಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತೊಲಗಿಸಿದ್ದೇವೆ” ಎಂದು ಹೇಳಿದರು.

ಏತನ್ಮಧ್ಯೆ, ಇಂಡಿಯಾ ಹೆಸರು ಬದಲಾವಣೆ ವಿಚಾರ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿಯೂ ಇಂಡಿಯಾ ಬದಲಿಗೆ ‘ಭಾರತ್ ”ಹೆಸರಿನ ಪ್ರಸ್ತಾಪ ಬಂದಿದೆ.

ಇಂದು ಜಿ-20 ಶೃಂಗಸಭೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ದೇಶದ ಹೆಸರನ್ನು ‘ಭಾರತ್” ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿಯೂ Bharat ಎಂದು ಪ್ರದರ್ಶಿಸಲಾಗಿದೆ.

ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಜಿ-20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.

ಜಿ-20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂಬ ಉಲ್ಲೇಖದ ನಂತರ ವಿವಾದಕ್ಕ ಕಾರಣವಾಗಿದ್ದು, ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲೈಯನ್ಸ್ (INDIA) ಎಂದು ಹೆಸರಿಟ್ಟಿರುವುದರಿಂದ ಹೆಸರು ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಟೀಕಿಸುತ್ತಿವೆ.

error: Content is protected !! Not allowed copy content from janadhvani.com