ಬೆಂಗಳೂರು,ಆ.23:ಇಡೀ ವಿಶ್ವದಲ್ಲೇ ಭಾರತದ ಕೀರ್ತಿ ಪತಾಕೆ ಮತ್ತೆ ವಿಜೃಂಬಿಸಿದೆ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ.
ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ 3 ಇಂದು ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ – 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ನೀಡಿದೆ. ಇದುವರೆಗೂ ಯಾವುದೇ ದೇಶ ಸ್ಪರ್ಶಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ನೌಕೆಯನ್ನು ಇಳಿಸಿರುವ ಇಸ್ರೋ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದೆ.
ಚಂದ್ರಯಾನ-3ರ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ 15 ರಿಂದ 17 ನಿಮಿಷಗಳನ್ನು ತೆಗೆದುಕೊಂಡಿತು. ಚಂದ್ರಯಾನ 3 ಅನ್ನು 14 ಜುಲೈ 2023ರಂದು ಮಧ್ಯಾಹ್ನ 2.30 ಕ್ಕೆ ಉಡಾವಣೆ ಮಾಡಲಾಗಿತ್ತು
ಚಂದ್ರನ ದಕ್ಷಿಣ ಧ್ರುವವನ್ನು ಚಂದ್ರಯಾನ 3ಕ್ಕೆ ಇಳಿಯುವ ಸ್ಥಳವಾಗಿ ನಿಗದಿಪಡಿಸಲಾಗಿತ್ತು. ಇದು ಶಾಶ್ವತ ನೆರಳಿನ ಪ್ರದೇಶವಾಗಿದ್ದು, ವಿಜ್ಞಾನಿಗಳು ಇಲ್ಲಿ ಸಂಪನ್ಮೂಲಗಳು ಸಮೃದ್ಧವಾಗಿದೆ. ಭವಿಷ್ಯದಲ್ಲಿ ಮಾನವಸಹಿತ ಕಾರ್ಯಾಚರಣೆಗಳಿಗೆ ಸೂಕ್ತವಾದ ಲ್ಯಾಂಡಿಂಗ್ ಸೈಟ್ಗಳನ್ನು ನೀಡಬಹುದು ಎಂದು ನಂಬಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ. ಲ್ಯಾಂಡರ್ ಮತ್ತು ರೋವರ್ ಒಂದು ಚಂದ್ರನ ದಿನದ (14 ಭೂಮಿಯ ದಿನಗಳು) ಮಿಷನ್ ಜೀವನವನ್ನು ಹೊಂದಿದ್ದು, ಈ ಸಮಯದಲ್ಲಿ ಅದು ಆನ್-ಸೈಟ್ ಪ್ರಯೋಗಗಳನ್ನು ನಡೆಸುತ್ತದೆ.
ವೇಗವನ್ನು ಕಡಿಮೆ ಮಾಡಲು ನಾಲ್ಕು ಥ್ರಸ್ಟರ್ ಎಂಜಿನ್‌ಗಳ ರೆಟ್ರೊ ಫೈರಿಂಗ್‌ನೊಂದಿಗೆ ವಿಕ್ರಮ್ ಲ್ಯಾಂಡರ್‌ನ ಚಾಲಿತ ಬ್ರೇಕಿಂಗ್ ಪ್ರಾರಂಭವಾಯಿತು. ನಂತರ ಕೊನೆಯ 17 ನಿಮಿಷಗಳು ಕಠಿಣ ಸವಾಲು ಎಂದು ವಿಜ್ಞಾನಿಗಳು ಹೇಳಿದ್ದರು.
ಭಾರತಕ್ಕೂ ಮುನ್ನ ಕೇವಲ ಮೂರು ಇತರ ದೇಶಗಳು (ರಷ್ಯಾ, ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್) ಯಶಸ್ವಿಯಾಗಿ ಚಂದ್ರನ ಮೇಲೆ ರೋವರ್ ಅನ್ನು ಇಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಭಾರತದ ಜನರ ಸಂತಸ ಮುಗಿಲು ಮುಟ್ಟಿತು .ವಿಶ್ವದ ನಾನಾ ದೇಶಗಳಲ್ಲಿ ಚಂದ್ರಯಾನ ಅಂತಿಮ ಚರಣವನ್ನು ಸಾಮಾಜಿಕ ಜಾಲ ತಾಣದಲ್ಲಿ ನೇರವಾಗಿ ವೀಕ್ಷಿಸಿದರು.ಇದು ಕೂಡ ಹೊಸ ದಾಖಲೆಯಾಗಿದೆ. ಪೀಣ್ಯದಲ್ಲಿರುವ ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ದಕ್ಷಿಣ ದೃವದಲ್ಲಿ ಇಳಿಸಲಾಯಿತು.
ಭೂಮಿ ಮೇಲಿನ ಸಂಕಲ್ಪ ಚಂದ್ರನ ಮೇಲೆ ಸಾಕಾರವಾಗಿದೆ :
ಪ್ರಧಾನಿ ಮೋದಿ
ವಿಕಸಿತ ಭಾರತದ ಇದು ದೊಡ್ಡ ಶಂಖನಾದ ಈ ಐತಿಹಾಸಿಕಾಕ್ಷಣವನ್ನ ವೀಕ್ಷಿಸಿದ ನಾವೇ ಧನ್ಯರು ನಾವು ಸಂಕಲ್ಪ ತೊಟ್ಟಂತೆ ಸಾಧನೆ ಮಾಡಿದ್ದೇವೆ ಸಮುದಾಯಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದೇಶದ ಪ್ರತಿ ಮನೆಯಲ್ಲೂ ಈಗ ಹಬ್ಬದ ವಾತಾವರಣ ಶುರುವಾಗಿದೆ ಭಾರತ ಇನ್ನು ಮುಂದೆ ಹೊಸ ವಿಶ್ವಾಸ ಮತ್ತು ರೂಪಿನಿಂದ ಮುನ್ನುಗ್ಗಲ್ಲಿದೆ ಎಂದು ಅವರು ಹೇಳಿದ್ದಾರೆ.
ನಾನು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದೇನೆ. ಆದರೂ ನನ್ನ ಮನಸ್ಸು ಸದಾ ಭಾರತದಲ್ಲಿತ್ತು ಐದು ನಿಮಿಷಗಳ ಕಾಲ ನಾನು ಈ ಅಪೂರ್ವ ಕ್ಷಣವನ್ನು ವೀಕ್ಷಿಸಿದ್ದೇನೆ ಇಡೀ ವಿಜ್ಞಾನಿ ಸಮುದಾಯಕ್ಕೆ ಹಾಗೂ ದೇಶದ ಜನತೆಗೆ ನನ್ನ ಕೋಟಿ ಕೋಟಿ ನಮನಗಳು ಎಂದು ಅವರು ತಿಳಿಸಿದ್ದಾರೆ.