janadhvani

Kannada Online News Paper

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ: ರಾಷ್ಟ್ರೀಯ ಸಮ್ಮೇಳನ ಪ್ರಯುಕ್ತ ‘ಸಂವಿಧಾನ ಯಾತ್ರೆ’- ನಾಳೆ ಶ್ರೀನಗರದಿಂದ ಆರಂಭ

ಶ್ರೀನಗರದ ಹಝರತ್ ಬಾಲ್ ಮಸೀದಿ ಸಮೀಪದಿಂದ ಪ್ರಯಾಣ ಆರಂಭ. ಹಝರತ್ ಬಾಲ್ ಮಸೀದಿ ಇಮಾಮ್ ಹಝರತ್ ಮೌಲಾನಾ ಮುಫ್ತಿ ಬಿಲಾಲ್ ಅಹ್ಮದ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ನವದೆಹಲಿ,ಆಗಸ್ಟ್.11| ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿರುವ ಸಂವಿಧಾನ ಯಾತ್ರೆ ಇದೇ 12ರ ಶನಿವಾರ ಆರಂಭವಾಗಲಿದೆ. ಶ್ರೀನಗರದ ಹಜರತ್ ಬಾಲ್ ಮಸೀದಿ ಸಮೀಪದಿಂದ ಪ್ರಯಾಣ ಆರಂಭವಾಗಲಿದೆ. ಹಝರತ್ ಬಾಲ್ ಮಸೀದಿ ಇಮಾಮ್ ಹಝರತ್ ಮೌಲಾನಾ ಮುಫ್ತಿ ಬಿಲಾಲ್ ಅಹ್ಮದ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಸ್ ಎಸ್ ಎಫ್ ರಾಷ್ಟ್ರೀಯ ಅಧ್ಯಕ್ಷ ಡಾ. ಮುಹಮ್ಮದ್ ಫಾರೂಕ್ ನಈಮಿ ಅಧ್ಯಕ್ಷತೆ ವಹಿಸುವರು.

22 ರಾಜ್ಯಗಳ ಮೂಲಕ ಹಾದು ಹೋಗುವ ಪ್ರವಾಸಕ್ಕೆ 33 ಕೇಂದ್ರಗಳಲ್ಲಿ ಸ್ವಾಗತ ಸಮ್ಮೇಳನ ನಡೆಯಲಿದೆ. ಇದರ ಅಂಗವಾಗಿ ನಾಯಕರು ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಧಾರ್ಮಿಕ ಸೌಹಾರ್ದ ಸಭೆಗಳು ಮತ್ತು ಶಿಕ್ಷಣ ತಜ್ಞರು ಮತ್ತು ಗ್ರಾಮಸ್ಥರೊಂದಿಗೆ ಸಭೆಗಳನ್ನು ನಡೆಸಲಾಗುವುದು.

ಸಂವಿಧಾನ್ ಯಾತ್ರೆಯು, ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತ ವಿಭಾಗಗಳಂತಹ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮಗ್ರ ಯೋಜನೆಗಳನ್ನು ಮುಂದಿಡಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಕೌಶಲ್ಯಾಭಿವೃದ್ಧಿ ಕೇಂದ್ರ, ಕಲಿಕಾ ಸಾಮಗ್ರಿಗಳ ವಿತರಣೆ ಇತ್ಯಾದಿಗಳನ್ನು ದೇಶದ ವಿವಿಧ ಕೇಂದ್ರಗಳಲ್ಲಿ ಪ್ರಸ್ತುತಪಡಿಸಲಿದೆ.

ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಸ್ವಾಗತ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸದ ಮುಂಚಿತವಾಗಿ, ಡಾ. ಮುಹಮ್ಮದ್ ಫಾರೂಕ್ ನಈಮಿ ನೇತೃತ್ವದಲ್ಲಿ ಎಸ್ ಎಸ್ ಎಫ್ ರಾಷ್ಟ್ರೀಯ ಪದಾಧಿಕಾರಿಗಳು ನಿನ್ನೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿ ಮಾಡಿ ಧ್ವಜವನ್ನು ಸ್ವೀಕರಿಸಿದರು.

ರಾಷ್ಟ್ರೀಯ ನಾಯಕರಾದ ಡಾ. ಮುಹಮ್ಮದ್ ಫಾರೂಕ್ ನಈಮಿ, ನೌಶಾದ್ ಆಲಂ ಮಿಸ್ಬಾಹಿ, ಝುಹೈರುದ್ದೀನ್ ನೂರಾನಿ ಪಶ್ಚಿಮ ಬಂಗಾಳ, ಉಬೈದುಲ್ಲಾಹ್ ಸಖಾಫಿ, ಖಮರ್ ಸಖಾಫಿ ಬಿಹಾರ್, ಮುಈನುದ್ದೀನ್ ತ್ರಿಪುರಾ, ದಿಲ್ಶಾದ್ ಕಾಶ್ಮೀರ ಮೊದಲಾದವರು ‘ಸಂವಿಧಾನ ಯಾತ್ರೆ’ಯನ್ನು ಮುನ್ನಡೆಸುವರು. ಮುಂದಿನ ತಿಂಗಳು 10 ರಂದು ಬೆಂಗಳೂರಿನಲ್ಲಿ ಪ್ರಯಾಣ ಕೊನೆಗೊಳ್ಳಲಿದೆ.

ನವೆಂಬರ್ 24 ರಿಂದ ‘We the people of India’ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಸಮ್ಮೇಳನವು ಮುಂಬೈ ಏಕದಾ ಉದ್ವಾನ್‌ನಲ್ಲಿ ನಡೆಯಲಿದೆ. ಇದರಲ್ಲಿ ದೇಶಾದ್ಯಂತದ ಎಸ್ ಎಸ್ ಎಫ್ ಕಾರ್ಯಕರ್ತರು ಸಂಗಮಿಸಲಿದ್ದಾರೆ. ಜೊತೆಗೆ ಎಕ್ಸಲೆನ್ಸ್ ಮೀಟ್ ಮತ್ತು ಡಿಬೇಟ್ ಕೂಡ ನಡೆಯಲಿದೆ.

error: Content is protected !! Not allowed copy content from janadhvani.com