_ಎಸ್ಸೆಸ್ಸೆಫ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ‘2ಬಿ ಮೀಸಲಾತಿ ರದ್ದು’ ಮಾಹಿತಿ ಕಾರ್ಯಾಗಾರ_
ಬೆಂಗಳೂರು : 2ಬಿ ಮೀಸಲಾತಿ ರದ್ದು ಆದೇಶ ರಾಜಕೀಯ ಪ್ರೇರಿತವಾಗಿದ್ದು ಯಾವುದೇ ಪೂರ್ವಯೋಜಿತ ಅಧ್ಯಯನ ಮಾಡದೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ಸಮುದಾಯವನ್ನು ದೂರ ಮಾಡುವ ಹುನ್ನಾರ ಇದಾಗಿದೆ ಎಂದು ಚಿಂತಕ, ಹೋರಾಟಗಾರ ಶಿವಸುಂದರ್ ಬೆಂಗಳೂರು ನುಡಿದರು.
ಎಸ್ಸೆಸ್ಸೆಫ್ ರಾಜ್ಯ ಸಮಿತಿ ಆಯೋಜಿಸಿರುವ 2ಬಿ ಮೀಸಲಾತಿ ರದ್ದು ಆದೇಶ ಸಾಧಕ ಬಾಧಕಗಳ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಚಾರ್ ವರದಿಯ ಪ್ರಕಾರ ಬಹುತೇಕ ಮುಸ್ಲಿಮರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ದಲಿತರಿಗಿಂತಲೂ ಹಿಂದುಳಿದಿದ್ದು ಇವರನ್ನು ಬಲಿಷ್ಠರಾದ ಬ್ರಾಹ್ಮಣರ ಜೊತೆ ಸ್ಪರ್ಧೆಗೆ ಇಳಿಸಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಬಿಎಂ ಹನೀಫ್ ಬೆಂಗಳೂರು ಮಾತನಾಡಿ ಚುನಾವಣೆ ದೃಷ್ಟಿಯಿಂದ ಬಡವರ ಅನ್ನದ ತಟ್ಟೆಗೆ ಕಲ್ಲು ಹಾಕುವ ಕೀಳುಮಟ್ಟದ ರಾಜಕೀಯ ಇದಾಗಿದ್ದು ಅತಿರೇಕಕ್ಕೆ ಒಳಗಾಗದೆ ಸಮುದಾಯ ಪ್ರಬುದ್ಧವಾಗಿ ಚಿಂತಿಸಿ ಪಕ್ವತೆ ಯೊಂದಿಗೆ ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ನುಡಿದರು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮಾತನಾಡಿ ರಾಜ್ಯದ ಬಹುತೇಕ ಜಿಲ್ಲೆಗಳ ನಾಯಕರಿಗೆ ನಾವು ಇದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಕಾರ್ಯಕರ್ತರು ಆತಂಕಕ್ಕೊಳಗಾಗದೆ ಸಂಯಮದಿಂದ ವರ್ತಿಸಬೇಕು. ನಾವು ಹಿರಿಯರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ಲತೀಫ್ ನಈಮಿ, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು, ಜನಾಬ್ ಹಕೀಂ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿಗಳಾದ ಮುಜೀಬ್ ಕೊಡಗು, ಶಿಹಾಬ್ ಬೆಂಗಳೂರು ಉಪಸ್ಥಿತರಿದ್ದರು.