ರಿಯಾದ್: ಸೌದಿ ಅರೇಬಿಯಾದಲ್ಲಿ ಗೃಹ ಕಾರ್ಮಿಕರ ವೀಸಾದಲ್ಲಿರುವ ಉದ್ಯೋಗಿಗಳ ಪ್ರಾಯೋಜಕತ್ವದ ಬದಲಾವಣೆಯ ಮೇಲೆ ಪಾಸ್‌ಪೋರ್ಟ್ ನಿರ್ದೇಶನಾಲಯವು(General Directorate of Passports-JAWAZAT) ಮಿತಿಯನ್ನು ನಿಗದಿಪಡಿಸಿದೆ. ಅಂತಹ ಉದ್ಯೋಗಿಗಳು ನಾಲ್ಕು ಬಾರಿಗಿಂತ ಮಿಗಿಲಾಗಿ ಪ್ರಾಯೋಜಕತ್ವವನ್ನು ಬದಲಾಯಿಸುವಂತಿಲ್ಲ ಎಂದು ಜವಾಝಾತ್(JAWAZAT) ಮಾಹಿತಿ ನೀಡಿದೆ. ಗೃಹ ಕಾರ್ಮಿಕರ ಪ್ರಾಯೋಜಕತ್ವ ಬದಲಾವಣೆ(sponsorship of domestic workers) ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಜವಾಝಾತ್ ಮಿತಿಯನ್ನು ವಿವರಿಸಿದೆ.
ಪ್ರಸ್ತುತ, ಗೃಹ ಕಾರ್ಮಿಕರ ವೀಸಾಗಳಲ್ಲಿ ಉದ್ಯೋಗದಲ್ಲಿರುವವರಿಗೆ ಪ್ರಾಯೋಜಕತ್ವದ ಬದಲಾವಣೆಯನ್ನು ಪೂರ್ಣಗೊಳಿಸುವುದು ಸುಲಭವಾಗಿದೆ. ವೈಯಕ್ತಿಕ ಪೋರ್ಟಲ್ ಅಬ್ಶೀರ್(Request through Absher) ಮೂಲಕ ಇದಕ್ಕೆ ಸೌಲಭ್ಯವಿದೆ. ಪ್ರಸ್ತುತ ಪ್ರಾಯೋಜಕರು ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಕೆಲಸಗಾರ ಮತ್ತು ಹೊಸ ಪ್ರಾಯೋಜಕರು ಇದನ್ನು ಒಪ್ಪಿಕೊಂಡ ನಂತರ, ಬದಲಾವಣೆಯು ಪೂರ್ಣಗೊಳ್ಳುತ್ತದೆ.ಆದರೆ ಪ್ರಾಯೋಜಕತ್ವವನ್ನು ಗರಿಷ್ಠ ನಾಲ್ಕು ಬಾರಿ ಮಾತ್ರ ಬದಲಾಯಿಸಬಹುದು ಎಂದು ಜವಾಝಾತ್ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.
ಕಾರ್ಮಿಕರ ಹೆಸರಿನಲ್ಲಿ ಯಾವುದೇ ಸಂಚಾರ ನಿಯಮ ಉಲ್ಲಂಘನೆಯಾಗದಿರುವುದು, ಹುರುಬ್ ದಾಖಲಿಸದಿರುವುದು ಮತ್ತು ಪ್ರಸ್ತುತ ಇಖಾಮಾದಲ್ಲಿ 15 ದಿನಗಳಿಗಿಂತ ಕಡಿಮೆಯಲ್ಲದ ಅವಧಿಯನ್ನು ಹೊಂದಿರುವುದು ಮುಂತಾದ ಷರತ್ತುಗಳನ್ನು ಪ್ರಾಯೋಜಕತ್ವದ ಬದಲಾವಣೆಗೆ ನಿಗದಿಪಡಿಸಲಾಗಿದೆ.