janadhvani

Kannada Online News Paper

ಮಂಗಳೂರಿನಲ್ಲಿ ಬೃಹತ್ ಹಕ್ಕೊತ್ತಾಯ ಸಭೆ: ಇದು ಮಾದರೀಯೋಗ್ಯ ಪ್ರತಿಭಟನೆ- ಪೋಲಿಸ್ ಕಮಿಷನರ್

ಮುಖ್ಯಮಂತ್ರಿ, ಸಚಿವರು, ಶಾಸಕರು ರಾಜಧರ್ಮ ಪಾಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಂಗಳೂರು: ದ.ಕ.ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವ ಅನೈತಿಕ ಪೊಲೀಸ್‌ಗಿರಿ, ಮತೀಯ ಗೂಂಡಾಗಿರಿ ಹಾಗೂ ಜಲೀಲ್ ಹತ್ಯೆಯನ್ನು ಖಂಡಿಸಿ ಮತ್ತು ಕೊಲೆಯಾದವರ ಕುಟುಂಬಗಳಿಗೆ ಪರಿಹಾರ ಧನದೊಂದಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಸ್-ಎಸ್ಸೆಸ್ಸೆಫ್ ವತಿಯಿಂದ ಮಂಗಳವಾರ ನಗರದ ಮಂಗಳೂರು ಮಿನಿ ವಿಧಾನಸೌಧದ ಮುಂದೆ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.

ಕೊಲೆಯಾದ ಫಾಝಿಲ್, ಜಲೀಲ್ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು. ಹತ್ಯೆಯಾದ ಜಲೀಲ್ ಕುಟುಂಬಕ್ಕೆ 1 ಕೋ.ರೂ. ಪರಿಹಾರ ನೀಡಬೇಕು. ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಜಾಮೀನು ಸಿಗದಂತಹ ಕಠಿಣ ಸೆಕ್ಷನ್ ವಿಧಿಸಬೇಕು. ಅಪರಾಧ ಕೃತ್ಯ ಎಸಗಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡುವುದನ್ನು ನಿಲ್ಲಿಸಬೇಕು ಎಂದು ಈ ಸಂದರ್ಭ ಹಕ್ಕೊತ್ತಾಯ ಮಂಡಿಸಲಾಯಿತು.

ಪೊಲೀಸರು ಯಾವ ಕಾರಣಕ್ಕೂ ಆಡಳಿತ ವ್ಯವಸ್ಥೆಯ ಕೈಗೊಂಬೆಯಾಗಬಾರದು. ವಿನಾಕಾರಣ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿ ಅವರು ಜೀವನಪರ್ಯಂತ ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತೆ ಮಾಡಬಾರದು. ಹದಗೆಟ್ಟಿರುವ ಕಾನೂನು ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು.ಅನೈತಿಕ ಗೂಂಡಾಗಿರಿಗೆ ಕಡಿವಾಣ ಹಾಕಬೇಕು. ಬಂಧಿಸಲ್ಪಟ್ಟ ಕೆಲವೇ ದಿನದೊಳಗೆ ಜಾಮೀನು ಪಡೆದು ಮರಳಿ ಬರುವಂತಹ ವ್ಯವಸ್ಥೆಗೆ ಪೊಲೀಸ್ ಇಲಾಖೆ ಆಸ್ಪದ ನೀಡಬಾರದು. ಮುಖ್ಯಮಂತ್ರಿ, ಸಚಿವರು, ಶಾಸಕರು ರಾಜಧರ್ಮ ಪಾಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೊಲೆಗೀಡಾದ ಜಲೀಲ್‌ ಸಹೋದರ ಮುಹಮ್ಮದ್ ಮುಸ್ಲಿಯಾರ್ ಮಾತನಾಡಿ ‘ಜಲೀಲ್ ಸೌಮ್ಯ ಸ್ವಭಾವದವ. ಯಾರ ತಂಟೆಗೂ ಹೋಗದವ. ಪತ್ನಿ ಮತ್ತು 10 ತಿಂಗಳ ಮಗು ಈಗ ಅನಾಥವಾಗಿದೆ. ಈ ಕೊಲೆಯಿಂದ ಜಲೀಲ್‌ನ ಕುಟುಂಬಕ್ಕೆ ಮಾತ್ರ ಅನ್ಯಾಯವಾಗಿಲ್ಲ. ಮಾನವಕುಲಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಇಲ್ಲಿ ನಡೆಸುವ ಪ್ರತಿಭಟನೆಯು ಸರಕಾರಕ್ಕೆ ಎಚ್ಚರಿಕೆಯಾಗಿದೆ ಎಂದರು.

ಎಸೆಸ್ಸೆಫ್ ಮುಖಂಡ ಮುಹಮ್ಮದ್ ನವಾಝ್ ಸಖಾಫಿ ಅಡ್ಯಾರ್ ಪದವು ಹಕ್ಕೊತ್ತಾಯ ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ಮುಖಂಡ ಸಿಎಚ್ ಮುಹಮ್ಮದಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಅಶ್ರಫ್ ಕಿನಾರ ಸ್ವಾಗತಿಸಿದರು.

ಎಸೆಸ್ಸೆಫ್ ರಾಷ್ಟ್ರೀಯ ನಾಯಕ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜೈ, ಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ, ಎಸ್‌ಜೆಯು ನಾಯಕ ಹಾಫಿಳ್ ಯಾಕೂಬ್ ಸಅದಿ ನಾವೂರು, ಎಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಟ್‌ ಸುಫ್ಯಾನ್ ಸಖಾಫಿ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿದರು.

ಸಮಾರಂಭದ ಮಧ್ಯೆ ಆಗಮಿಸಿದ ಮಂಗಳೂರು ಕಮಿಷನರ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಾ, ವಾಹನ ಓಡಾಟಕ್ಕೆ ಯಾವುದೇ ಅಡ್ಡಿಪಡಿಸದೆ, ಬಹಳ ಶಾಂತಿಯುತವಾಗಿ ನಡೆಸಿದ ಈ ಪ್ರತಿಭಟನೆಯು ಮಾದರೀಯೋಗ್ಯವಾಗಿದೆ ಎಂದರು. ತಮ್ಮ ಬೇಡಿಕೆಯಂತೆ, ಸಂಬಂಧಪಟ್ಟ ಪ್ರಕರಣಗಳನ್ನು ಅತ್ಯಂತ ಪ್ರಾಮಾಣಿಕವಾಗಿ ತನಿಕೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಮೊಯ್ದಿನ್ ಬಾವಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಬಿಎಂ ಮಮ್ತಾಜ್ ಅಲಿ, ಸುಹೈಲ್ ಕಂದಕ್, ಅಶ್ರಫ್ ಸಅದಿ ಮಲ್ಲೂರು, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುಲ್ ಜಲೀಲ್ ಬ್ರೈಟ್, ನೇಜಾರ್ ಹಾಜಿ, ಇಕ್ಬಾಲ್ ಕೃಷ್ಣಾಪುರ, ಮುಹಮ್ಮದ್ ಹನೀಫ್ ಬಜಪೆ, ಇಸ್ಮಾಯೀಲ್ ಕೆಸಿ ರೋಡ್, ಎಕೆ ಹಸೈನಾರ್ ಸಕಲೇಶಪುರ, ವೆನ್ಝ್ ಅಬ್ದುಲ್ಲ, ಮುಸ್ತಫಾ ನಯೀಮಿ, ಇಸ್ಮಾಯೀಲ್ ಮಾಸ್ಟರ್, ಫಾರೂಕ್ ಸಖಾಫಿ, ಅಶ್ರಫ್ ಕಲ್ಲೇಗ ಮತ್ತಿತರರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com