janadhvani

Kannada Online News Paper

ಮುಸ್ಲಿಂ ವ್ಯಾಪಾರಿಗಳ ಮೇಲೆ ಗುಂಪು ಹಲ್ಲೆ:ದುಷ್ಕರ್ಮಿಗಳನ್ನು ಕೊಲೆಯತ್ನ ಪ್ರಕರಣದಡಿ ಬಂಧಿಸಬೇಕು- ಡಿವೈಎಫ್‌ಐ

ಪ್ರಕರಣ ನಡೆದು ಎರಡು ದಿನಗಳಾದರೂ ಪೊಲೀಸ್ ಇಲಾಖೆ ಈವರೆಗೆ ಯಾವೊಬ್ಬನನ್ನು ಬಂಧಿಸದೆ ಮತೀಯ ತಾರತಮ್ಯವನ್ನು ಎಸಗಿದೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣದ ಆರೋಪಿಗಳನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್ಐ ಒತ್ತಾಯಿಸಿದ್ದು, ಸಂತ್ರಸ್ತರಿಗೆ ನಷ್ಟ ಪರಿಹಾರ ನೀಡಲು ಮತ್ತು ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.

ಕಾಣಿಯೂರು ಪ್ರದೇಶದಲ್ಲಿ ಜವಳಿ ಮಾರಾಟಮಾಡಲು ತೆರಳಿದ್ದ ಮಂಗಳೂರಿನ ಅಡ್ಡೂರಿನ ವ್ಯಾಪಾರಸ್ಥರಾದ ರಫೀಕ್ ಮತ್ತು ರಮೀಝ್ ಎಂಬವರ ಮೇಲೆ ಬಿಜೆಪಿ ಬೆಂಬಲಿಗರು ಎಂದು ಆರೋಪಿಸಲಾಗಿರುವ ಗುಂಪೊಂದು ಮಾರಣಾಂತಿಕ ಹಲ್ಲೆಯನ್ನು ನಡೆಸಿತ್ತು. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಹಲ್ಲೆ ನಡೆಸಿದ ತಪ್ಪಿತಸ್ಥರನ್ನು ಕೊಲೆಯತ್ನ ಪ್ರಕರಣದಡಿ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿದ್ದು, ಜಿಲ್ಲಾ ಎಸ್‌ಪಿಗೆ ಶನಿವಾರ ಮನವಿ ಸಲ್ಲಿಸಿದೆ.

“ಅಡ್ಡೂರಿನ ರಫೀಕ್ ಮತ್ತು ರಮೀಝ್ ಅನ್ನುವ ವ್ಯಾಪಾರಿಗಳು ಕಳೆದ ಹಲವಾರು ವರುಷಗಳಿಂದ ಊರಿಂದೂರಿಗೆ ಮನೆ ಮನೆ ತೆರಳಿ ಬೆಡ್ ಶೀಟ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಅವರು ಕಾಣಿಯೂರು ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮುಸಲ್ಮಾನರು ಎಂಬ ಕಾರಣಕ್ಕೆ ಬಿಜೆಪಿ ಬೆಂಬಲಿತ ಅಕ್ರಮ ಕೂಟವೊಂದು ಅವರ ಮೇಲೆ ಮುಗಿಬಿದ್ದು ಕಬ್ಬಿಣದ ಸರಳು, ದೊಣ್ಣೆ ಇನ್ನಿತರ ಆಯುಧಗಳಿಂದ ಕೈಕಾಲು ಮುರಿಯುವಂತೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಲ್ಲದೆ, ಅವರ ಮೈಮೇಲೆ ವಾಹನಗಳನ್ನು ಹತ್ತಿಸಿ ಕೊಲೆಯತ್ನಕ್ಕೂ ಪ್ರಯತ್ನಿಸಿರುತ್ತಾರೆ” ಎಂದು ಡಿವೈಎಫ್‌ಐ ಹೇಳಿದೆ.

“ಸತತ ಎರಡು ಗಂಟೆಗಳ ಕಾಲ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣ ನಡೆದು ಎರಡು ದಿನಗಳಾದರೂ ಪೊಲೀಸ್ ಇಲಾಖೆ ಈವರೆಗೆ ಯಾವೊಬ್ಬನನ್ನು ಬಂಧಿಸದೆ ಮತೀಯ ತಾರತಮ್ಯವನ್ನು ಎಸಗಿದೆ” ಎಂದು ಡಿವೈಎಫ್‌ಐ ಆಕ್ರೋಶ ವ್ಯಕ್ತಪಡಿಸಿದೆ.

ಮುಸಲ್ಮಾನರನ್ನು ಗುರಿಯಾಗಿಸಿ ನಿರಂತರ ನಡೆಯುವಂತಹ ದಾಳಿಗಳಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಘಟನೆ ಸಾಕ್ಷಿಯಾಗಿದೆ ಎಂದು ಹೇಳಿರುವ ಡಿವೈಎಫ್‌ಐ, “ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಹಾಗೂ ಮುಸ್ಲಿಂ ವ್ಯಾಪಾರಿಗಳಾದ ರಫೀಕ್ ಮತ್ತು ರಮೀಝ್ ಮೇಲಿನ ಮಾರಾಣಾಂತಿಕ ಹಲ್ಲೆಗೆ ಕಾರಣರಾದವರ ಮೇಲೆ ಕೊಲೆಯತ್ನ ಪ್ರಕರಣದಡಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಸರಕಾರ ಸಂತ್ರಸ್ತರಿಗೆ ನಷ್ಟ ಪರಿಹಾರವನ್ನು ನೀಡಬೇಕು” ಎಂದು ಒತ್ತಾಯಿಸಿದೆ.

ಸಂತ್ರಸ್ತರನ್ನು ಭೇಟಿಯಾದ ಡಿವೈಎಫ್‌ಐ ಮುಖಂಡರು

ಕಾಣಿಯೂರಿನಲ್ಲಿ ಗುಂಪು ಹಲ್ಲೆಗೊಳಗಾದ ಸಂತ್ರಸ್ತರನ್ನು ಡಿವೈಎಫ್‌ಐ ಮುಖಂಡರು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದ್ದಾರೆ. ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಡಿವೈಎಫ್ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಮುಸ್ತಫ ಕಲ್ಲಕಟ್ಟೆ, ಆಸೀಫ್ ಮುಂತಾದವರು ಇದ್ದರು.

error: Content is protected !! Not allowed copy content from janadhvani.com