ಕುವೈತ್ ಸಿಟಿ: ಅಧಿಕೃತ ಅಂಕಿಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 21374 ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ಮೃತಪಟ್ಟಿದ್ದಾರೆ. ಇದು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ. ಗಲ್ಫ್‌ನಲ್ಲಿ ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು ಭಾರತೀಯರು ಮೃತಪಟ್ಟಿರುವುದಾಗಿ ಅಂಕಿಅಂಶಗಳು ತೋರಿಸುತ್ತವೆ.
ಕೋವಿಡ್ ಸಾಂಕ್ರಾಮಿಕದ ತೀವ್ರ ಹಂತವನ್ನು ಒಳಗೊಂಡಿರುವ 2019 ರಿಂದ 2021 ರವರೆಗೆ ಗಲ್ಫ್ ರಾಷ್ಟ್ರಗಳಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆಯನ್ನು ಕೇಂದ್ರವು ಸಂಸತ್ತಿನಲ್ಲಿ ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಹೆಚ್ಚು ಭಾರತೀಯರು ನಿಧನ ಹೊಂದಿದ್ದಾರೆ. ಸೌದಿ ಅರೇಬಿಯಾದಲ್ಲಿ, 2019 ರಲ್ಲಿ 2,353 ಭಾರತೀಯರು ಮೃತಪಟ್ಟಿದ್ದು, 2020 ರಲ್ಲಿ 3,753 ಕ್ಕೆ ಏರಿಕೆಯಾಗಿದೆ. 2021ರಲ್ಲಿ ಸೌದಿಯಲ್ಲಿ 2328 ಭಾರತೀಯರು ನಿಧನರಾದರು.
ಯುಎಇಯಲ್ಲಿ, 2019 ರಲ್ಲಿ 1,751 ಭಾರತೀಯರ ಮರಣ ದಾಖಲಾಗಿದ್ದರೆ, ಇದು 2020 ರಲ್ಲಿ 2,454 ಕ್ಕೆ ಏರಿದೆ.ಮರಣ ಸಂಖ್ಯೆ 2021 ರಲ್ಲಿ ಮತ್ತೆ 2,714 ಕ್ಕೆ ಏರಿತು. 2020 ಮತ್ತು 21 ರಲ್ಲಿ, ಕೋವಿಡ್ ಸಾಂಕ್ರಾಮಿಕದಿಂದ ಮರಣ ಸಂಖ್ಯೆ ಹೆಚ್ಚಿಳಗೊಂಡಿದೆ.
ಮೂರನೇ ಸ್ಥಾನದಲ್ಲಿರುವ ಕುವೈತ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ 3187 ಭಾರತೀಯರು ಮೃತಪಟ್ಟಿದ್ದಾರೆ. ವರ್ಷವಾರು ಅಂಕಿ ಅಂಶವು 2019 ರಲ್ಲಿ 707, 2020 ರಲ್ಲಿ 1279 ಮತ್ತು 2021 ರಲ್ಲಿ 1201 ಆಗಿದೆ. ವಿಶ್ವಕಪ್ ಫುಟ್‌ಬಾಲ್‌ಗೆ ಸಂಬಂಧಿಸಿದ ನಿರ್ಮಾಣ ಕಾರ್ಯದಿಂದಾಗಿ ಭಾರತೀಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಕತಾರ್‌ನಲ್ಲಿ 2019 ರಲ್ಲಿ 250, 2020 ರಲ್ಲಿ 385 ಮತ್ತು 2021 ರಲ್ಲಿ 420 ಭಾರತೀಯರು ಮರಣ ಹೊಂದಿದ್ದಾರೆ.
ಬಹ್ರೇನ್ 2019 ರಲ್ಲಿ 211, 2020 ರಲ್ಲಿ 303 ಮತ್ತು 2021 ರಲ್ಲಿ 352 ಭಾರತೀಯರ ಮರಣ ದಾಖಲಿಸಿದೆ. ಕಳೆದ ವರ್ಷ ಒಮಾನ್‌ನಲ್ಲಿ 913 ಭಾರತೀಯ ಕಾರ್ಮಿಕರ ಮರಣ ವರದಿಯಾಗಿವೆ ಎಂದು ಡೇಟಾ ತೋರಿಸುತ್ತದೆ.







