janadhvani

Kannada Online News Paper

ಧಾರವಾಡ: ಹಿಂದುತ್ವ ಉಗ್ರವಾದಿಗಳಿಂದ ಮುಸ್ಲಿಮರ ಅಂಗಡಿಗಳಿಗೆ ದಾಳಿ- ಎಚ್.ಡಿ.ಕೆ ತೀವ್ರ ಖಂಡನೆ

‘ನನ್ನ ಪ್ರಕಾರ ಇವರು ಹಿಂದೂಗಳೇ ಅಲ್ಲ, ಮನಷ್ಯರೂ ಅಲ್ಲ. ಧರ್ಮಾಂದತೆಯ ಮತ್ತಿನಲ್ಲಿ ತೇಲುತ್ತಿರುವ ಕ್ರೂರ ಮೃಗಗಳು.

ಬೆಂಗಳೂರು: ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹಿಂದುತ್ವ ಉಗ್ರವಾದಿಗಳು ಮುಸ್ಲಿಮರ ಅಂಗಡಿಗಳಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಕಲ್ಲಂಗಡಿಯನ್ನು ರಸ್ತೆಗೆಸೆದು ಹಾಳು ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿ ಪೋಸ್ಟ್ ಮಾಡಿರುವ ಅವರು, ರಾಮಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಉಗ್ರರಿಗಿಂತ ಕೀಳಾಗಿ ವರ್ತಿಸಿದ್ದಾರೆ. ಇವರ ವಿರುದ್ಧ ಉಗ್ರ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಾಮಭಕ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ನಾಶಪಡಿಸಿ, ಅವರು ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿರುವುದು ಹೇಯ ಮತ್ತು ಪರಮ ಕಿರಾತಕ ಕೃತ್ಯ. ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸುವ ಭಯಾತ್ಪಾದಕರಿಗೂ, ಶಾಂತಿ-ಸೌಹಾರ್ದತೆಗೆ ಕಿಚ್ಚಿಡುತ್ತಿರುವ ಈ ಕಿರಾತಕರಿಗೂ ವ್ಯತ್ಯಾಸವೇ ಇಲ್ಲ. ತಿನ್ನುವ ಅನ್ನಕ್ಕೆ ಮಣ್ಣುಹಾಕಿ ಬದುಕಿಗೆ ಬೆಂಕಿ ಇಡುವ ಇಂಥ ಪ್ರವೃತ್ತಿ ಅನಾಗರಿಕ-ಅಸಹ್ಯ. ಕರ್ನಾಟಕವನ್ನು ಈ ದುಷ್ಟರು, ಶಿಲಾಯುಗದತ್ತ ಹಿಮ್ಮೆಟ್ಟಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಈ ರಕ್ಕಸರು ಕಲ್ಲಂಗಡಿಯನ್ನು ರಸ್ತೆಗೆಸೆದು ನಾಶ ಮಾಡಿದ ಪರಿಯನ್ನು ಗಮಿನಿಸಿದರೆ ಸಾಕು, ಇವರ ರಾಕ್ಷಸ ಪ್ರವೃತ್ತಿ ಉಗ್ರರಿಗಿಂತ ಕಮ್ಮಿಯೇನಲ್ಲ. ಅನ್ನವನ್ನೇ ಹಾಳುಗೆಡವಿದ ಈ ನೀಚರಿಗೆ ತಕ್ಕ ಪಾಠ ಕಲಿಸಲೇಬೇಕು. ಇವರ ವಿರುದ್ಧ ಸರಕಾರವು ಕೂಡಲೇ ಭಯೋತ್ಪಾದನೆ ವಿರುದ್ಧದ ಕಾಯ್ದೆ ಅಡಿ ಕೇಸು ದಾಖಲಿಸಬೇಕು. ಸರ್ವ ಜನಾಂಗದ ತೋಟಕ್ಕೆ ಸಮಾಧಿ ಕಟ್ಟುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆಯಾ? ಎಂಬ ಸಂಶಯ ನನ್ನದು. ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಬಾಯಿಗೆ ಬೀಗ ಹಾಕಿಕೊಂಡು, ‘ಸತ್ತ ಸರಕಾರಕ್ಕೆ ನಾನೇ ಸಾಹುಕಾರ’ ಎನ್ನುವಂತೆ ಬೆಂಕಿ ನಡುವೆ ಪಿಟೀಲು ಬಾರಿಸುತ್ತಿದ್ದ ನೀರೋ ದೊರೆಯನ್ನು ಮೀರಿಸುತ್ತಿದ್ದಾರೆ.

ಅನ್ನಕ್ಕೆ ಮಣ್ಣು ಹಾಕುವುದು ಯಾವ ಧರ್ಮ?  ಬದುಕಿಗೆ ಬೆಂಕಿ ಇಡುವುದು ಯಾವ ಧರ್ಮ? ಮನುಷ್ಯತ್ವಕ್ಕೆ ಸಮಾಧಿ ಕಟ್ಟುವುದು ಯಾವ ಧರ್ಮ? ಮಾನವೀಯತೆಯ ಸಾಕಾರಮೂರ್ತಿ ಶ್ರೀರಾಮಚಂದ್ರನಿಂದ ಇವರು ಕಲಿತದ್ದು ಯಾವ ಧರ್ಮ? ಸೇವೆಯನ್ನೇ ಧರ್ಮವೆಂದು ನಂಬಿದ ಶ್ರೀ ಆಂಜನೇಯನಿಂದ ಇವರು ಕಲಿತ ಆದರ್ಶ ಧರ್ಮ ಇದೇನಾ? ಎಂದು ಪ್ರಶ್ನೆಮಾಡಿರುವ ಅವರು, ‘ನನ್ನ ಪ್ರಕಾರ ಇವರು ಹಿಂದೂಗಳೇ ಅಲ್ಲ, ಮನಷ್ಯರೂ ಅಲ್ಲ. ಧರ್ಮಾಂದತೆಯ ಮತ್ತಿನಲ್ಲಿ ತೇಲುತ್ತಿರುವ ಕ್ರೂರ ಮೃಗಗಳು. ಅಂಗಡಿಗಳನ್ನು ನಾಶಪಡಿಸಿ, ಕಲ್ಲಂಗಡಿಯನ್ನು ಹಾಳುಗೆಡವಿದ ಎಲ್ಲ ಕಿರಾತಕರ ವಿರುದ್ಧ ಸರಕಾರ ಕೂಡಲೇ ಕ್ರಿಮಿನಲ್ ಕೇಸು ದಾಖಲಿಸಬೇಕು, ರಾಜ್ಯದಿಂದಲೇ ಗಡೀಪಾರು ಮಾಡಬೇಕು. ಇದು ನನ್ನ ಆಗ್ರಹ” ಎಂದಿದ್ದಾರೆ.

ದುಷ್ಕರ್ಮಿಗಳು ನಡೆಸಿದ ಈ ಪೈಶಾಚಿಕ ಕೃತ್ಯದ ಬಗ್ಗೆ ಕಲ್ಲಂಗಡಿ ಕಳೆದುಕೊಂಡ ನಬಿಸಾಬಿ ಹಾಗೂ ದೇಗುಲದ ಮುಖ್ಯಸ್ಥರು ನೀಡಿರುವ ಈ ಹೇಳಿಕೆಗಳನ್ನು ಸರಕಾರ ಗಂಭಿರವಾಗಿ ಪರಿಗಣಿಸಬೇಕು ಎಂಬುದಾಗಿ ಅವರು ಸರಕಾರವನ್ನು ಒತ್ತಾಯ ಮಾಡಿದ್ದಾರೆ.

error: Content is protected !! Not allowed copy content from janadhvani.com