ಬೆಂಗಳೂರು, ಫೆ.21- ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂಪರ ಸಂಘಟನೆ ಯುವಕನ ಶವಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ ನಡೆದಿದ್ದು, ಹಲವು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಸೆಕ್ಷನ್ 144 ನಡುವೆಯೂ ಆಸ್ಪತ್ರೆಯಿಂದ ಮನೆಗೆ ಶವಯಾತ್ರೆ ನಡೆಸುವ ವೇಳೆ ಅಹಿತಕರ ಘಟನೆಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಬೀಸಿದ್ದಾರೆ. ಆಶ್ರುವಾಯು ಸಿಡಿಸಿ ಉದ್ರಿಕ್ತರನ್ನು ಚದುರಿಸಲು ಯತ್ನಿಸಿದ್ದಾರೆ.
ಮೆರವಣಿಗೆ ಸಂದರ್ಭದಲ್ಲಿ ಪೊಲೀಸರ ಎದುರಿಗೇ ಉದ್ರಿಕ್ತರು ಅಂಗಡಿ-ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಕಲ್ಲು ತೂರಾಟದಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಶವಯಾತ್ರೆ ಗಾಂಧಿ ಬಝಾರ್ ಮಸೀದಿ ಬಳಿ ಬಂದಾಗ ಉದ್ರಿಕ್ತ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು. ಇನ್ನು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಈ ನಡುವೆ ಶಿವಮೊಗ್ಗ ನಗರ ಶಾಸಕ , ಸಚಿವ ಈಶ್ವರಪ್ಪ ಅವರು ಹರ್ಷ ಮನೆಗೆ ಭೇಟಿ ನೀಡಿ ಅಲ್ಲಿಂದ ಈಶ್ವರಪ್ಪ ನೇತೃತ್ವದಲ್ಲಿ ರೋಟರಿ ಚಿತಾಗಾರಕ್ಕೆ ಮೆರವಣಿಗೆ ನಡಸಿದ್ದಾರೆ.







