ಬೆಂಗಳೂರು: ಹಿಜಾಬ್ ಧರಿಸಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿಗಳ ಕಲಿಕೆಯನ್ನು ಮೊಟಕುಗೊಳಿಸುವ ದುರುದ್ದೇಶದಿಂದ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ವಿವಾದವೆಬ್ಬಿಸಿ, ವಿದ್ಯಾ ದೇಗುಲಕ್ಕೆ ಕಲ್ಲೆಸೆದು, ಕೇಸರಿ ಶಾಲು ಧರಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ವಿದ್ಯಾ ಕೇಂದ್ರಗಳನ್ನು ಸಂಘರ್ಷ ತಾಣವಾಗಿ ಮಾರ್ಪಡಿಸಿದ ಹಿನ್ನೆಲೆ ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಮತ್ತೆ ವಿಸ್ತರಣೆ ಮಾಡಿ ಶುಕ್ರವಾರ (ಫೆಬ್ರವರಿ 11) ಆದೇಶ ನೀಡಲಾಗಿದೆ.
ಫೆಬ್ರವರಿ 16ರ ವರೆಗೆ ರಾಜ್ಯಾದ್ಯಂತ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಜೆ ಮುಂದುವರಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಕಾಲೇಜುಗಳಿಗೆ ಫೆಬ್ರವರಿ 16ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದ್ದು ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಭುಗಿಲೆದ್ದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಅವ್ಯವಸ್ಥೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯಲ್ಲಿ ಮೊದಲಿಗೆ ಸೂಕ್ಷ್ಮ ಪರಿಸ್ಥಿತಿ ಇರುವ ಜಿಲ್ಲೆಗಳಾದ ಉಡುಪಿ, ಬಾಗಲಕೋಟೆ, ಮೈಸೂರು, ಮಂಡ್ಯ, ಬೀದರ್ ಜಿಲ್ಲೆಗಳಿಂದ ಮಾಹಿತಿ ಪಡೆದಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ. ಸೋಮವಾರ ಹೈಸ್ಕೂಲ್ ಬಳಿ ಕಟ್ಟೆಚ್ಚರ ವಹಿಸಿ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಸಂಘಟನೆಗಳ ಮೇಲೆ ನಿಗಾ ಇಡಿ. ಇಲಾಖೆಗಳ ನಡುವೆ ಸಮನ್ವಯತೆ ಇರಲಿ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ತಾಕೀತು ಹಾಕಿದ್ದಾರೆ. ಬೀದರ್, ಬಾಗಲಕೋಟೆ, ಉಡುಪಿ, ಮೈಸೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಹಿಜಾಬ್, ಕೇಸರಿ ಶಾಲು ವಿಚಾರದಲ್ಲಿ ಗಲಾಟೆಯಾಗಿದ್ದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಹೆಚ್ಚುವರಿ ಭದ್ರತೆ ನೀಡಿ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಡಿಸಿ, ಎಸ್ಪಿ, ಸಿಇಒ ಜತೆ ಸಿಎಂ ಚರ್ಚಿಸಿದ್ದಾರೆ. ಫೆಬ್ರವರಿ 14 ರಿಂದ ರಾಜ್ಯಾದ್ಯಂತ 9, 10ನೇ ತರಗತಿಗಳು ಪುನಾರಂಭ ಆಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ಸೂಕ್ಷ್ಮ ಜಿಲ್ಲೆಗಳಲ್ಲಿ ಡಿಸಿ, ಎಸ್ಪಿ ಶಾಲೆಗಳಿಗೆ ಭೇಟಿ ನೀಡಬೇಕು. ಶಾಲೆಗಳ ಪ್ರಾಂಶುಪಾಲರು, ಪೋಷಕರ ಜತೆ ಡಿಡಿಪಿಐ ಸಂಪರ್ಕ ಹೊಂದಿರಬೇಕು. ಶಾಂತಿ ಸಭೆ ನಡೆಸಿ ಹೈಕೋರ್ಟ್ ಆದೇಶ ಪಾಲನೆಗೆ ತಿಳಿಸಬೇಕು. ಯಾವುದೇ ಒತ್ತಡಕ್ಕೆ ಸ್ಥಳೀಯ ಆಡಳಿತ ಮಣಿಯಬಾರದು ಎಂದು ಹೇಳಿದ್ದಾರೆ.
ಆದ್ಯತೆ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ಕೊಡಲಾಗಿದೆ. ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಕ್ರಮಕೈಗೊಳ್ಳುವುದು. ಧಾರ್ಮಿಕ ಮುಖಂಡರ ಜತೆ ಶಾಂತಿ ಸಭೆ ನಡೆಸುವುದು. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳ ಆರಂಭಕ್ಕೆ ಒತ್ತು ನೀಡುತ್ತೇವೆ. ಪರಿಸ್ಥಿತಿ ಗಮನಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ತಿಳಿಸುತ್ತೇವೆ ಎಂದು ಸಿಎಂ ಜತೆ ಸಭೆ ನಂತರ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.