ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಬುಝ ಗ್ರಾಮದ ಬೆಟ್ಟವೊಂದರ ಸೀಳಿನಲ್ಲಿ 43 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಬಾಬು (23) ಅವರನ್ನು ಸುರಕ್ಷಿತವಾಗಿ ಬದುಕಿಸುವ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೇನಾ ತಂಡವು ಬಾಬುವಿನ ಬಳಿಗೆ ಬಂದು ಊಟ, ನೀರು ನೀಡಿದ ನಂತರ ಸುರಕ್ಷತಾ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಿ ಬಾಬು ಅವರನ್ನು ಸೇನೆ ಮೇಲೆತ್ತಿದೆ. ಬೆಳಗ್ಗೆ 9.30ಕ್ಕೆ ಆರಂಭವಾದ 40 ನಿಮಿಷಗಳ ಕಾರ್ಯಾಚರಣೆಯ ಕೊನೆಯಲ್ಲಿ ಸೇನೆಯು ಬಾಬುನನ್ನು ಬೆಟ್ಟದ ತುದಿಗೆ ಕರೆದೊಯ್ದಿತು.
ಕೇರಳ ಸರ್ಕಾರದ ಮನವಿಯ ಮೇರೆಗೆ ಪರ್ವತಾರೋಹಣದಲ್ಲಿ ತರಬೇತಿ ಪಡೆದ ವೆಲಿಂಗ್ಟನ್‌ನ ಮದ್ರಾಸ್ ರೆಜಿಮೆಂಟ್ ಸೆಂಟರ್‌ನಿಂದ 12 ಸಿಬ್ಬಂದಿಯ ಒಂದು ತಂಡ ಮತ್ತು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ 22 ಸಿಬ್ಬಂದಿಯ ಎರಡನೇ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.
ರಾತ್ರಿಯೇ ಸ್ಥಳಕ್ಕಾಗಮಿಸಿದ ಸೇನಾ ತಂಡ ಬೆಟ್ಟದ ತುದಿ ತಲುಪಿ ಕೆಳಗೆ ಬಾಬು ಕುಳಿತಿದ್ದ ಜಾಗಕ್ಕೆ ಹಗ್ಗ ಬಿಗಿದಿತ್ತು. ಸೈನಿಕರು ಬಾಬು ಜೊತೆ ಮಾತನಾಡಿದ್ದರು. ಕರ್ನಲ್ ಶೇಖರ್ ಅತ್ರಿ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಕೇರಳ ಮೂಲದ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್ ಕೂಡ ತಂಡದಲ್ಲಿದ್ದರು.
ಬೆಟ್ಟದ ಕೆಳಗೆ, ವೈದ್ಯರು ಸೇರಿದಂತೆ ವೈದ್ಯಕೀಯ ತಂಡವು ಬಾಬುಗಾಗಿ ಕಾಯುತ್ತಿದೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರು ಮುಂದಿನ ಆರೈಕೆಯನ್ನು ಒದಗಿಸುತ್ತಾರೆ. ಕೆಳಗೆ ಇಳಿಸಿದ ಕೂಡಲೇ ಬಾಬು ಅವರನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.