janadhvani

Kannada Online News Paper

ಪಕ್ಷದ ಶಿಸ್ತು ಉಲ್ಲಂಘನೆ- ಮಹಮ್ಮದ್ ಅಸ್ಗರ್ ಬಿಜೆಪಿ ಪಕ್ಷದಿಂದ ಔಟ್

ಮಂಗಳೂರು: ವಿಧಾನಸಭಾ ಕ್ಷೇತ್ರದ ಸಾಂಬಾರ್ ತೋಟ ಬೂತ್ ಸಂಖ್ಯೆ 109 ರ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ರವರನ್ನು ಬಿಜೆಪಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ಪಜೀರು ಗ್ರಾಮದ ಬೂತ್ ಸಂಖ್ಯೆ 109 ಸಾಂಬಾರ್ ತೋಟ ಬೂತ್ ನ ಬಿಜೆಪಿ ಅಧ್ಯಕ್ಷರಾದ ಮಹಮ್ಮದ್ ಅಸ್ಕರ್ ರವರನ್ನು ಬಿಜೆಪಿ ಪಕ್ಷದ
ಶಿಸ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಮಂಗಳೂರು ಮಂಡಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ವಿಟ್ಲದ ಸಾಲೆತ್ತೂರಿನ ಜ.6 ರಂದು ನಡೆದ ಔತಣಕೂಟದಲ್ಲಿ ಭಾಗವಹಿಸಿದ ಮದುಮಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಬಗ್ಗೆ ವಿಟ್ಲ ಹಿಂದೂ ಜಾಗರಣೆ ವೇದಿಕೆ ಕಾರ್ಯದರ್ಶಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸುತ್ತಿದ್ದ ವಿಟ್ಲ ಠಾಣೆ ಪೊಲೀಸರು ಮದುಮಗ ಬಾಷಿತ್ ಸಹೋದರ ಅರ್ಷಾದ್ ನನ್ನು ಜ .8 ರಂದು ಮಂಜೇಶ್ವರದಿಂದ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು.ಬಳಿಕ ಸಂಜೆ ವೇಳೆ ಆತನನ್ನು ಬಿಟ್ಟು ಕಳುಹಿಸಿದ್ದರು.

ಆರೋಪಿಯ ಸಹೋದರನ ಬಿಡುಗಡೆಯಲ್ಲಿ ಮಹಮ್ಮದ್ ಅಸ್ಗರ್ ಕೈವಾಡವಿದೆಯೆಂಬ ಗುಲ್ಲು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಅಸ್ಗರ್ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತರಾಗಿರುವ ಅಸ್ಗರ್, ರಹೀಮ್ ಉಚ್ಚಿಲರ ಆಪ್ತ ಸ್ನೇಹಿತ.

ಮುಂದಕ್ಕೆ ಅಸ್ಗರ್ ಅವರು ಯಾವ ರಾಜಕೀಯ ಪಕ್ಷದಿಂದ ಗುರುತಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಎಸ್ಡಿಪಿಐ ಇಲ್ಲವೇ ಜೆಡಿಎಸ್ ನಲ್ಲಿ ಸೇರಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.