ನವದೆಹಲಿ : ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ಸಹಿತ ದೇಶದಲ್ಲಿ ವ್ಯಾಪಕವಾಗಿ ಮತೀಯ ಗಲಭೆಗೆ ಬಹಿರಂಗ ಆಹ್ವಾನ ನೀಡಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿಯು ಮೌನಿಯಾಗಿರುವುದನ್ನು ಪ್ರಶ್ನಿಸಿ ಅದ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇಂಡಿಯನ್ ಇನ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ (IIM) ಬೆಂಗಳೂರು ಮತ್ತು ಅಹ್ಮದಾಬಾದ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು, ದೇಶದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ಹಿಂಸಾಚಾರ, ದ್ವೇಷದ ಭಾಷಣದ ವಿರುದ್ಧ ಧ್ವನಿ ಎತ್ತಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯರೊಂದಿಗೆ ಬಹಿರಂಗ ಪತ್ರದಲ್ಲಿ ಆಗ್ರಹಿಸಿದ್ದಾರೆ.
‘ಪ್ರಧಾನಿಗಳೇ ನಿಮ್ಮ ಮೌನವು ದ್ವೇಷ ಬಿತ್ತುವ ಧ್ವನಿಗಳಿಗೆ ಧೈರ್ಯ ತುಂಬುತ್ತದೆ. ನಮ್ಮನ್ನು ವಿಭಜಿಸಿ ದೇಶದ ಏಕತೆ ಸಮಗ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಹರಿದ್ವಾರ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಕೆಲವು ಹಿಂದೂ ನಾಯಕರು ಮುಸ್ಲಿಂರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಜನರನ್ನು ಒತ್ತಾಯಿಸಿದ್ದರಲ್ಲದೇ ಸಾರ್ವಜನಿಕವಾಗಿ ನರಮೇಧಕ್ಕೆ ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ‘ಸಂವಿಧಾನ ನಮಗೆಲ್ಲ ಧಾರ್ಮಿಕ ಸ್ವಾತಂತ್ರ್ಯ ನೀಡಿದರೂ ಈ ಕುರಿತು ದೇಶದಲ್ಲೀಗ ಭಯದ ಭಾವನೆಯಿದೆ. ಪ್ರಾರ್ಥನಾ ಸ್ಥಳ, ಚಚ್ರ್ಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಯಾವುದೇ ಭಯವಿಲ್ಲದೇ ಮುಕ್ತವಾಗಿ ಮುಸ್ಲಿಂ ಸಹೋದರ, ಸಹೋದರಿಯರ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಐಐಎಂ ಬೆಂಗಳೂರಿನ ಪ್ರಾಧ್ಯಾಪಕರಾದ ದೀಪಕ್ ಮಲ್ಘಾಣ, ಹೇಮಾ ಸ್ವಾಮಿನಾಥನ್, ರಾಜಲಕ್ಷ್ಮಿ ವಿ ಮೂರ್ತಿ, ಪ್ರತೀಕ್ ರಾಜ್ ಮತ್ತು ದಲ್ಹಿಯಾ ಮಣಿ ಅವರು ಈ ಪತ್ರವನ್ನು ಸಿದ್ಧಪಡಿಸಿದ್ದಾರೆ.







