janadhvani

Kannada Online News Paper

ಬುಲ್ಲಿ ಬಾಯ್’ ಆ್ಯಪ್ ವಿವಾದ: ಬೆಂಗಳೂರು ಮೂಲದ ಯುವಕ ಪೊಲೀಸ್ ವಶಕ್ಕೆ

ಮುಂಬೈ: ವಿವಾದಿತ ಬುಲ್ಲಿ ಬಾಯ್ ಅಪ್ಲಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬೆಂಗಳೂರು ಮೂಲದ ಯುವಕನನ್ನು ವಶಕ್ಕೆ ಪಡೆದು ಮುಂಬೈಗೆ ವಿಚಾರಣೆಗೆ ಕರೆದೊಯ್ದಿದ್ದಾರೆ.

ನೂರಾರು ಮುಸ್ಲಿಂ ಮಹಿಳೆಯರ ಫೊಟೋಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ‘ಬುಲ್ಲಿ ಬಾಯ್’ ಅಪ್ಲಿಕೇಶನ್ ಮುಖಾಂತರ ಅವರನ್ನು ಹರಾಜಿಗಿಡಲಾಗುತ್ತಿತ್ತು.

ಮಹಿಳಾ ದ್ವೇಷಿ ಹಾಗೂ ಸ್ತ್ರೀ ವಿರೋಧಿ ಅಂಶಗಳಿರುವ ಒಕ್ಕಣೆಗಳೊಂದಿಗೆ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ಹಂಚುತ್ತಿದ್ದ ‘ಬುಲ್ಲಿ ಬಾಯ್’ ಅಪ್ಲಿಕೇಶನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೂಡಾ ವಿಚಾರಣೆ ನಡೆಸುತ್ತಿದ್ದು, ಮುಂಬೈ ಪೊಲೀಸರು ಪ್ರತ್ಯೇಕವಾಗಿ ತನಿಖೆ ಕೈಗೆತ್ತಿಕೊಂಡಿದ್ದರು.

ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ, ಅಸಾದುದ್ದೀನ್ ಉವೈಸಿ ಸೇರಿದಂತೆ ಹಲವಾರು ಮಂದಿ ಕೃತ್ಯವನ್ನು ನಾಚಿಕೆಗೇಡಿನ ಸಂಗತಿಯೆಂದು ಖಂಡಿಸಿದ್ದರು.

ತೀವ್ರ ವಿವಾದದ ಬಳಿಕ ‘ಬುಲ್ಲಿ ಬಾಯ್’ ಅಪ್ಲಿಕೇಶನನ್ನು ಸರಕಾರ ನಿಷೇದಿಸಿದೆ.