ಮಂಗಳೂರು: ವರ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆ, ಭರವಸೆಗಳ ಹೊರತಾಗಿಯೂ ಸುರತ್ಕಲ್ (ಎನ್ಐಟಿಕೆ) ತಾತ್ಕಾಲಿಕ ಟೋಲ್ ಗೇಟ್ ಅಕ್ರಮವಾಗಿ ಮುಂದುವರಿದಿದೆ. ಇದನ್ನು ಕೊನೆಗೊಳಿಸಬೇಕಾಗಿ ಸಚಿವ ನಿತಿನ್ ಗಡ್ಕರಿಯವರಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಈಗ ಮತ್ತೆ ತಾತ್ಕಾಲಿಕ ನೆಲೆಯಲ್ಲಿ ಮೂರು ತಿಂಗಳ ಅವಧಿಗೆ ಟೆಂಡರ್ ಕರೆದು ಟೋಲ್ ಸಂಗ್ರಹ ಗುತ್ತಿಗೆ ನವೀಕರಿಸಲಾಗಿದೆ. ಇದು ಖಂಡನೀಯ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿಯವರ ಸ್ಪಷ್ಟ ಭರವಸೆಯ ಹೊರತಾಗಿಯೂ ಪದೇ ಪದೆ ಟೋಲ್ ಸಂಗ್ರಹ ಗುತ್ತಿಗೆ ತಾತ್ಕಾಲಿಕ ನೆಲೆಯಲ್ಲಿ ನವೀಕರಣಗೊಳ್ಳುತ್ತಿರುವುದು ಜನಪ್ರತಿನಿಧಿಗಳು ಈ ವಂಚನೆಯಲ್ಲಿ ಶಾಮೀಲಾಗಿರುವ ಅನುಮಾನ ಮೂಡಿಸುತ್ತದೆ.
ಈಗಿನ ಗುತ್ತಿಗೆ ಅವಧಿ ಮುಕ್ತಾಯದ ನಂತರ ಯಾವುದೇ ಕಾರಣಕ್ಕೂ ನವೀಕರಣಗೊಳಿಸದೆ ಸುರತ್ಕಲ್ ಟೋಲ್ ಕೇಂದ್ರವನ್ನು ತೆರವುಗೊಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದೆ.
ಸುರತ್ಕಲ್ ಟೋಲ್ ಗೇಟ್ ಆರು ವರ್ಷದ ಹಿಂದೆ ಆರಂಭಗೊಳ್ಳುವಾಗ ಒಂಬತ್ತು ಕೀ ಮೀ ಅಂತರದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರ ಕಾರ್ಯಾರಂಭಗೊಂಡ ತಕ್ಷಣ ಅದರೊಂದಿಗೆ ವಿಲೀನಗೊಳಿಸುವ ವಾಗ್ದಾನ ನೀಡಲಾಗಿತ್ತು. ಸರಕಾರಕ್ಕೂ ಲಿಖಿತವಾಗಿ ವಿಲೀನದ ಪ್ರಸ್ತಾಪ ಮುಂದಿಟ್ಟು ಆರು ತಿಂಗಳ ಅವಧಿಗೆ ಟೋಲ್ ಸಂಗ್ರಹಿಸಲು ತಾತ್ಕಾಲಿಕ ನೆಲೆಯಲ್ಲಿ ಅನುಮತಿ ಪಡೆಯಲಾಗಿತ್ತು. ಆದರೆ ಆರು ತಿಂಗಳಲ್ಲಿ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರ ಆರಂಭಗೊಂಡರೂ, ಸುರತ್ಕಲ್ ಟೋಲ್ ಕೇಂದ್ರವನ್ನು ಅದರೊಂದಿಗೆ ವಿಲೀನಗೊಳಿಸದೆ ವಂಚಿಸಲಾಯಿತು.
ನಂತರವೂ ತಾತ್ಕಾಲಿಕ ನೆಲೆಯಲ್ಲಿ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಗುತ್ತಿಗೆಯನ್ನು ತಾತ್ಕಾಲಿಕ ನೆಲೆಯಲ್ಲಿ ನವೀಕರಿಸುತ್ತಾ ಬರಲಾಯಿತು. ಈ ಅನ್ಯಾಯ, ಅಕ್ರಮ ಟೋಲ್ ಸಂಗ್ರಹದ ವಿರುದ್ದ ಪರಿಸರದ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಹಲವು ಹಂತದ ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ. ಸರಣಿ ಪ್ರತಿಭಟನೆಗಳ ತರುವಾಯ 2018 ರಲ್ಲಿ ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ಹೆಜಮಾಡಿಯಲ್ಲಿರುವ ನವಯುಗ್ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನವನ್ನು ಕೈಗೊಂಡಿತು. ರಾಜ್ಯ ಸರಕಾರಕ್ಕೆ ಪ್ರಸ್ಥಾಪವನ್ನು ಕಳುಹಿಸಿ ಅನುಮೋದನೆಯನ್ನೂ ಪಡೆದುಕೊಂಡಿತು. ಆದರೆ ಬೇರೆ ಬೇರೆ ಹಿತಾಸಕ್ತಿಗಳ ಕಾರಣ ವಿಲೀನ ನಿರ್ಧಾರ ನಾಲ್ಕು ವರ್ಷಗಳ ದೀರ್ಘ ಅವಧಿಯಿಂದ ನಿಯಮಗಳಿಗೆ ವಿರುದ್ದವಾಗಿ ಬಾಕಿ ಉಳಿದಿದೆ.
ಹೆದ್ದಾರಿ ಪ್ರಾಧಿಕಾರ ವಿಲೀನ ತೀರ್ಮಾನವನ್ನು ಜಾರಿಗೊಳಿಸದೆ ಮೂರು ತಿಂಗಳು, ಆರು ತಿಂಗಳ ಸಣ್ಣ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಸಂಗ್ರಹ ಗುತ್ತಿಗೆಯನ್ನು ನವೀಕರಿಸುತ್ತಲೇ ಮುಂದುವರಿದುದರ ವಿರುದ್ದ ಹೋರಾಟ ಸಮಿತಿ ಹನ್ನೊಂದು ದಿನಗಳ ದೀರ್ಘ ಅವಧಿಯ ಹಗಲು ರಾತ್ರಿ ಧರಣಿ, ಪಾದಯಾತ್ರೆಯ ಸಹಿತ ಹಲವು ಹೋರಾಟಗಳನ್ನು ನಡೆಸಿದೆ. ಈ ಸಂದರ್ಭ ಸುರತ್ಕಲ್ ಟೋಲ್ ಗೇಟ್ ಎತ್ತಂಗಡಿಯ ಕುರಿತು ಹಲವು ಭರವಸೆಗಳನ್ನು ನೀಡಿ ವಂಚಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಒಂದು ಹೆಜ್ಜೆ ಮುಂದೆ ಹೋಗಿ “ವಿಲೀನ ಅಲ್ಲ, ಸುರತ್ಕಲ್ , ಬಿ ಸಿ ರೋಡ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿಸುತ್ತೇವೆ” ಎಂದು ಆಶ್ವಾಸನೆ ನೀಡಿದ್ದರು. ಆದರೆ ಈ ಭರವಸೆಗಳು ಸುಳ್ಳಾಗಿವೆ.
ಈ ನಡುವೆ ತೀವ್ರ ಪ್ರತಿಭಟನೆಗಳ ಕಾರಣ ಮಂಗಳೂರು ನೋಂದಣಿ ಖಾಸಗಿ ವಾಹನಗಳಿಗೆ ಟೋಲ್ ರಹಿತ ಪ್ರಯಾಣ, ಖಾಸಗಿ ಬಸ್ಸುಗಳ ಸಹಿತ ಸಾರ್ವಜನಿಕ ಸಾರಿಗೆಗಳಿಗೆ ರಿಯಾಯತಿ ಪಾಸ್ ಗಳನ್ನು ನೀಡಿರುವುದನ್ನು ರದ್ದುಗೊಳಿಸಲು ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಸಂಗ್ರಹ ಗುತ್ತಿಗೆದಾರರು ಹಲವು ಬಾರಿ ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲೆಲ್ಲಾ ತೀವ್ರ ಪ್ರತಿಭಟನೆ ಒಡ್ಡಿ ಮಂಗಳೂರು ನೋಂದಣಿಯ ಖಾಸಗಿ ವಾಹನಗಳ ಉಚಿತ ಪ್ರಯಾಣದ ಅವಕಾಶವನ್ನು ಉಳಿಸಿಕೊಳ್ಳಲಾಗಿದೆ.
ದೇಶಾದ್ಯಂತ ಎಲ್ಲಾ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯದ ಸಂದರ್ಭ ಅದೇ ನೆಪ ಮುಂದಿಟ್ಟು ಸ್ಥಳೀಯ ರಿಯಾಯತಿಗಳನ್ನು ರದ್ದುಗೊಳಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಯಿತು. ಆದರೆ ನಾಗರಿಕರನ್ನು ಒಗ್ಗೂಡಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಅದಕ್ಕೆ ಅವಕಾಶಕೊಡಲಿಲ್ಲ. ಅದರ ಪರಿಣಾಮ ಮಂಗಳೂರು ನೋಂದಣಿಯ ಖಾಸಗಿ ವಾಹನಗಳ ಓಡಾಟಕ್ಕೆ ಫಾಸ್ಟ್ ಟ್ಯಾಗ್ ರಹಿತ ಎರಡು ಗೇಟ್ ಗಳನ್ನು ಉಳಿಸಲಾಗಿದೆ. ಆದರೆ ಬಸ್ ಸಹಿತ ಸಾರ್ವಜನಿಕ ಸಾರಿಗೆಯ ರಿಯಾಯತಿಗಳು ಬಹುತೇಕ ರದ್ದು ಗೊಂಡಿದೆ. ಖಾಸಗಿ ಬಸ್ ಗಳು ಈ ವೆಚ್ಚವನ್ನು ಪ್ರಯಾಣಿಕರ ಟಿಕೇಟ್ ಗಳ ಮೇಲೆ ಹಾಕಿ ಹೊರೆಯನ್ನು ಸಾರ್ವಜನಿಕರ ಹೆಗಲಿಗೆ ದಾಟಿಸಿವೆ. ಈ ರೀತಿ ಹಾಗೂ ಕೊರೋನ ಸಾಂಕ್ರಾಮಿಕ, ಲಾಕ್ ಡೌನ್ ಅವಧಿಯಲ್ಲಿ ಪ್ರತಿಭಟನೆಗೆ ಅವಕಾಶಗಳು ನಿರಾಕರಿಸಲ್ಪಟ್ಟ ಸಂದರ್ಭಗಳನ್ನೂ ಬಳಸಿ ನಿಯಮ ಬಾಹಿರವಾಗಿ ಮೂರು ತಿಂಗಳು, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಗುತ್ತಿಗೆಯನ್ನು ನವೀಕರಿಸಿ ಅಕ್ರಮವಾಗಿ ಟೋಲ್ ಕೇಂದ್ರವನ್ನು ಮುಂದುವರಿಸಲಾಗಿದೆ.
ಇದೇ ಡಿಸೆಮಬರ್ ತಿಂಗಳಲ್ಲಿ ಮತ್ತೊಮ್ಮೆ ಮೂರು ತಿಂಗಳ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆ ತಾತ್ಕಾಲಿಕ ನೆಲೆಯಲ್ಲಿ ನವೀಕರಣ ಗೊಂಡಿದ್ದು ಇದು ಸಾರ್ಮಜನಿಕರಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಹೋರಾಟ ಸಮಿತಿ ಈ ಅನ್ಯಾಯವನ್ನು ತೀವ್ರವಾಗಿ ಖಂಡಿಸುತ್ತದೆ. ಈ ವಂಚನೆಗೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ನೇರ ಹೊಣೆಯಾಗಿರುತ್ತಾರೆ. ಈ ಬಾರಿ ನಡೆದಿರುವ ಟೋಲ್ ಸಂಗ್ರಹ ಗುತ್ತಿಗೆ ನವೀಕರಣ ಕೊನೆಯ ನವೀಕರಣ ಆಗಬೇಕು. ಮೂರು ತಿಂಗಳ ಅವಧಿ ಮುಗಿಯುವ ಸಂದರ್ಭ ಸುರತ್ಕಲ್ ಟೋಲ್ ಕೇಂದ್ರವನ್ನು ತೀರ್ಮಾನದಂತೆ ಅಲ್ಲಿಂದ ಎತ್ತಂಗಡಿ ಮಾಡಬೇಕು, ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಗುತ್ತಿಗೆಯನ್ನು ನವೀಕರಿಸಬಾರದು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಮತ್ತೊಮ್ಮೆ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತೀವ್ರತರದ ಹೋರಾಟವನ್ನು ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ನಳಿನ್ ಕುಮಾರ್ ಕಟೀಲ್ ಮಾತು ಉಳಿಸಿಕೊಳ್ಳಲಿ
ನಿತಿನ್ ಗಡ್ಕರಿ ಮಂಗಳೂರು ಭೇಟಿಯ ಸಂದರ್ಭ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವು ಕುರಿತು ಸಭೆ ಏರ್ಪಡಿಸಿ ಸಮಸ್ಯೆ ಇತ್ಯರ್ಥ ಪಡಿಸಿ ನಳಿನ್ ಕುಮಾರ್ ಕಟೀಲ್ ಮಾತು ಉಳಿಸಿಕೊಳ್ಳಲಿ, ಇಲ್ಲದಿದ್ದಲ್ಲಿ ಕಪ್ಪು ಬಾವುಟ ಪ್ರತಿಭಟನೆ ಎದುರಿಸಲಿ.
2019 ರ ಡಿಸೆಂಬರ್ ತಿಂಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಸಂದರ್ಭ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ನಲ್ಲಿಯೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ರದ್ದುಗೊಳಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆ ಸಂದರ್ಭ ಟೋಟ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇದು ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು.
ಆ ಸಂದರ್ಭ ಸಂಸತ್ ಅಧಿವೇಶನದ ಪ್ರಯುಕ್ತ ದೆಹಲಿಯಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದ ಕೆಲವು ಸಂಸದರ ನಿಯೋಗದೊಂದಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದರು. ಸಚಿವ ನಿತಿನ್ ಗಡ್ಕರಿ ಸುರತ್ಕಲ್ ಟೋಲ್ ಗೇಟ್ ತೆರವು ಸಂಬಂಧ ವಿಶೇಷ ಸಭೆ ನಡೆಸಲು ಪ್ರಾಧಿಕಾರ, ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವುಗೊಳ್ಳಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಇದು ಜಿಲ್ಲೆಯ ಪತ್ರಿಕೆಗಳಲ್ಲಿ ವರದಿಯೂ ಆಗಿತ್ತು. ಈ ಪ್ರಯತ್ನಕ್ಕಾಗಿ ಕೆನರಾ ಬಸ್ಸು ಮಾಲಕರ ಸಂಘದವರು ಪತ್ರಿಕೆಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಜಾಹೀರಾತನ್ನೂ ನೀಡಿದ್ದರು. ಆದರೆ ನಿತಿನ್ ಗಡ್ಕರಿಯವರು ಸಭೆ ನಡೆಸಿ ಟೋಲ್ ಗೇಟ್ ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿ ಈಗ ಎರಡು ವರ್ಷ ಸಂದಿದೆ. ಈ ನಡುವೆ ಮೂರು ಬಾರಿ ಟೋಲ್ ಸಂಗ್ರಹ ಗುತ್ತಿಗೆ ನವೀಕರಣಗೊಂಡಿದೆ. ಆದರೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿ ಈವರೆಗೆ ವಿಶೇಷ ಸಭೆಯಾಗಲಿ, ಸಾಮಾನ್ಯ ಸಭೆಯಾಗಲಿ ನಡೆದಿಲ್ಲ. ಬದಲಿಗೆ ಟೋಲ್ ದರವನ್ನು ಏರಿಸಿ ಪ್ರಯಾಣಿಕರ ಸುಲಿಗೆಯನ್ನು ಹೆಚ್ಚಿಸಲಾಗಿದೆ.
ಈಗ ಸ್ವತಹ ನಿತಿನ‌್ ಗಡ್ಕರಿ ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಸಂಬಂಧಿಸಿ ಜನವರಿ 10 ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭ ಅಂದು ಮಾತು ಕೊಟ್ಟಂತೆ ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಸಚಿವ ಗಡ್ಕರಿಯವರ ನೇತೃತ್ವದಲ್ಲಿ ಸಭೆ ನಡೆಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ನೋಡಿಕೊಳ್ಳಬೇಕು. ಆ ಮೂಲಕ ಹಲವು ವರ್ಷಗಳಿಂದ ಜನರ ಅಕ್ರಮ ಸುಲಿಗೆಯಲ್ಲಿ ತೊಡಗಿರುವ ಸುರತ್ಕಲ್ ಟೋಲ್ ಕೇಂದ್ರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಒಂದು ವೇಳೆ ಸಚಿವರು ಸಭೆ ನಡೆಸಲು ಮುಂದಾಗದಿದ್ದಲ್ಲಿ ಹೋರಾಟ ಸಮಿತಿಯಿಂದ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟ ಸಮಿತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.
ಮುನೀರ್ ಕಾಟಿಪಳ್ಳ (ಸಂಚಾಲಕರು) ರಾಘವೇಂದ್ರ ರಾವ್ (ಅಧ್ಯಕ್ಷರು, ಜಯ ಕರ್ನಾಟಕ ಸುರತ್ಕಲ್) ದಿನೇಶ್ ಹೆಗ್ಡೆ ಉಳೇಪಾಡಿ (ವಕೀಲರು) ದಯಾನಂದ ಶೆಟ್ಟಿ (ಮಾಜಿ ಕಾರ್ಪೊರೇಟರ್) ಬಿ ಕೆ ಇಮ್ತಿಯಾಜ್ (ಜಿಲ್ಲಾಧ್ಯಕ್ಷರು, ಡಿವೈಎಫ್ಐ ದ. ಕ.) ದಿನೇಶ್ ಕುಂಪಲ (ಅಧ್ಯಕ್ಷರು, ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್, ದಕ್ಷಿಣ ಕನ್ನಡ) ರಾಜೇಶ್ ಪೂಜಾರಿ ಕುಳಾಯಿ (ಯುವ ಕಾಂಗ್ರೆಸ್ ಮುಖಂಡರು), ಹೋರಾಟ ಸಮಿತಿಯ ಮುಖಂಡರಾದ ರಾಜೇಶ್ ಶೆಟ್ಟಿ ಪಡ್ರೆ, ಜೀಷನ್ ಅಲಿ (ವಕೀಲರು), ಅಜ್ಮಲ್ ಕಾನ ಮುಂತಾದವರು ಉಪಸ್ಥಿತರಿದ್ದರು.