janadhvani

Kannada Online News Paper

ದ್ವೇಷ ಭಾಷಣ- ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸುಪ್ರೀಂಕೋರ್ಟ್‌ ಗೆ ಪತ್ರ

ದ್ವೇಷದ ಭಾಷಣ ಮಾಡಿದ್ದಲ್ಲದೇ, ಸಮುದಾಯವೊಂದರ ಹತ್ಯೆಗೆ ಮುಕ್ತ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ನವದೆಹಲಿ: ಹರಿದ್ವಾರ ಮತ್ತು ದೆಹಲಿಯಲ್ಲಿ ನವೆಂಬರ್ 17 ಮತ್ತು 19 ರಂದು ನಡೆದ ‘ಧರ್ಮ ಸಂಸದ್’​ ಕಾರ್ಯಕ್ರಮದಲ್ಲಿ ಮಾಡಿದ ಉದ್ರೇಕಕಾರಿ ದ್ವೇಷ ಭಾಷಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸುಪ್ರೀಂಕೋರ್ಟ್‌ನ 76 ಹಿರಿಯ ವಕೀಲರು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ನ 76 ವಕೀಲರು ಸಿಜೆಐ ಎನ್‌.ವಿ.ರಮಣ ಅವರಿಗೆ ಪತ್ರ ಬರೆದು, ದೆಹಲಿ ಮತ್ತು ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ಜನಾಂಗೀಯ ಹತ್ಯಾಕಾಂಡ’ದ ಕರೆ ನೀಡಿದ್ದು, ಈ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಗಿರಿ ಅವರ ನೇತೃತ್ವದಲ್ಲಿ ಮೂರು ದಿನಗಳ ‘ಧರ್ಮ ಸಂಸದ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಸಹ ಹಿಂದೂ ಯುವ ವಾಹಿನಿ ಇದೇ ರೀತಿಯ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ದ್ವೇಷದ ಭಾಷಣ ಮಾಡಿದ್ದಲ್ಲದೇ, ಸಮುದಾಯವೊಂದರ ಹತ್ಯೆಗೆ ಮುಕ್ತ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಎರಡೂ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಲಾಗಿದೆ. ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆ ಉಂಟುಮಾಡುತ್ತದೆ ಎಂದು ಸುಪ್ರೀಂಕೋರ್ಟ್‌ ವಕೀಲರು ಕಳವಳ ವ್ಯಕ್ತಪಡಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್ 120ಬಿ, 121ಎ, 153ಎ, 153ಬಿ, 295ಎ ಮತ್ತು 298ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಜೆಐಗೆ ನಿರ್ದೇಶನ ನೀಡಬೇಕು ಅನ್ನೋದು ವಕೀಲರ ಆಗ್ರಹವಾಗಿದೆ.