ಆಲಪ್ಪುಝ, ಡಿ.20: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರಾದ ಮನ್ನಂಚೇರಿಯ ರಾಜೇಂದ್ರಪ್ರಸಾದ್, ಅಲಿಯಾಸ್ ಪ್ರಸಾದ್ (39) ಮತ್ತು ಮರಾರಿಕುಲಂ ಸೌತ್‌ನ ರತೀಶ್ ಅಲಿಯಾಸ್ ಕುಟ್ಟನ್ (31) ಎಂದು ಗುರುತಿಸಲಾಗಿದೆ.
ಶಾನ್ ಹತ್ಯೆಯ ಸಂಚಿನಲ್ಲಿ ಇವರಿಬ್ಬರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರಪ್ರಸಾದ್ ಸಂಚು ರೂಪಿಸಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನ್ನಂಚೇರಿಯ ಕುಪ್ಪೆಝಂ ಜಂಕ್ಷನ್‌ನಲ್ಲಿ ರಾತ್ರಿ 7.30ರ ಸುಮಾರಿಗೆ ಶಾನ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಶನಿವಾರ ರಾತ್ರಿ ತೀವ್ರವಾಗಿ ಗಾಯಗೊಂಡಿದ್ದ ಅವರು ರಾತ್ರಿ 11.30ರ ಸುಮಾರಿಗೆ ಮೃತಪಟ್ಟಿದ್ದರು. ಅವರು ತಮ್ಮ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಕಾರಿನಿಂದ ಹೊರಬಂದ ಜನರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ.
ಹತ್ಯೆಯ ನಂತರ, ಗುಂಪು ಭಾನುವಾರ ಬೆಳಗ್ಗೆ ಆಲಪ್ಪುಝ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರನ್ನು ಅವರ ಮನೆಯಲ್ಲಿ ಹತ್ಯೆಮಾಡಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಸಾಖರೆ ನೇತೃತ್ವದ ವಿಶೇಷ ತನಿಖಾ ತಂಡ ಅವಳಿ ರಾಜಕೀಯ ಕೊಲೆಗಳ ತನಿಖೆ ನಡೆಸುತ್ತಿದೆ. ಶಾನ್ ಹತ್ಯೆಯಲ್ಲಿ ಭಾಗಿಯಾಗಿರುವ ಒಟ್ಟು 10 ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಸಾಖರೆ ಹೇಳಿದ್ದಾರೆ. ಉಳಿದ ಎಂಟು ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆದಿದೆ. ಶ್ರೀನಿವಾಸ್ ಹತ್ಯೆಯಲ್ಲಿ ಕನಿಷ್ಠ 12 ಮಂದಿ ದುಷ್ಕರ್ಮಿಗಳು ಭಾಗಿಯಾಗಿದ್ದರು.
ಅಪರಾಧದಲ್ಲಿ ಭಾಗಿಯಾಗಿರುವವರ ಬಗ್ಗೆ ಪೊಲೀಸರಿಗೆ ಖಚಿತವಾದ ಸುಳಿವು ಸಿಕ್ಕಿದೆ ಎಂದು ಸಾಖರೆ ಹೇಳಿದರು. ಶಾನ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಸೋಮವಾರ ಚೇರ್ತಲ ಸಮೀಪದ ಕಣಿಚುಕುಲಂಗರದಲ್ಲಿ ಪತ್ತೆಯಾಗಿದೆ.
ಈ ನಡುವೆ ರಾಜಕೀಯ ಉದ್ವಿಗ್ನತೆಯನ್ನು ಶಮನಗೊಳಿಸಲು ಸೋಮವಾರ ಮಧ್ಯಾಹ್ನ ಆಲಪ್ಪುಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಬೇಕಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ. ಇದೀಗ ಮಂಗಳವಾರ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಇದಕ್ಕೂ ಮುನ್ನ ಬಿಜೆಪಿ ಮುಖಂಡರು ಶ್ರೀನಿವಾಸ್ ಅಂತ್ಯಸಂಸ್ಕಾರದ ಹಿನ್ನೆಲೆ ಸಭೆಗೆ ಬರಲು ಆಗದ ಅನಾನುಕೂಲತೆ ಕುರಿತು ತಿಳಿಸಿದರು.