janadhvani

Kannada Online News Paper

ಉಪ್ಪಿನಂಗಡಿ: ಪ್ರತಿಭಟನಾ ನಿರತರ ಮೇಲೆ ಪೋಲೀಸ್ ಲಾಠಿಚಾರ್ಜ್- ಆತೂರ್ ತಂಙಳ್ ಗಂಭೀರ

ಉಪ್ಪಿನಂಗಡಿ: ಇಲ್ಲಿನ ಹಳೇ ಗೇಟು ಎಂಬಲ್ಲಿ ಹಸಿ ಮೀನು ಸ್ಟಾಲ್‌ ನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ನಡೆದ ತಲ್ವಾರು ದಾಳಿಗೆ ಸಂಬಂಧಿಸಿದಂತೆ ಪಿಎಫ್ಐ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ನಡೆಯುತಿದ್ದ ಪ್ರತಿಭಟನೆ ಹಠಾತ್ ಆಗಿ ಹಿಂಸೆಯರೂಪ ತಾಳಿದ್ದು ಪೊಲೀಸರ ಲಾಠೀ ಚಾರ್ಜ್’ಗೆ 10 ಕ್ಕೂ ಅಧಿಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ತಲ್ವಾರು ದಾಳಿಗೆ ಸಂಬಂಧಿಸಿದಂತೆ ಡಿ.14 ರಂದು ಬೆಳಿಗ್ಗೆ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿರಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆಯ ಮುಂಭಾಗದಲ್ಲಿ ಇಂದು ಬೆಳಗ್ಗಿನಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸಂಜೆಯವರೆಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯು, ಸಂಜೆಯ ಬಳಿಕ ಪೋಲೀಸರಿಂದ ಹಠಾತ್ ಲಾಟಿ ಚಾರ್ಜ್ ನಡೆದಿದ್ದು ಹತ್ತಕ್ಕಿಂತಲೂ‌ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಸಯ್ಯಿದ್ ಅಲ್ ಹಾದಿ ಆತೂರ್ ತಂಙಳ್ ರವರು ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ವಶಕ್ಕೆ ಪಡೆದುಕೊಂಡವರನ್ನು ಸಂಜೆಯ ಬಳಿಕ ಬಿಡುಗಡೆಗೊಳಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದರು. ರಾತ್ರಿ ವೇಳೆ ಇನ್ನೂ ಇಬ್ಬರು ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮತ್ತೆ ಜನ ಜಮಾಯಿಸಿದರು. ಈ ವೇಳೆ, ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.

ಸಂಜೆ ವೇಳೆ ಸ್ಥಳಕ್ಕಾಗಮಿಸಿದ್ದ ಪುತ್ತೂರು ತಹಶೀಲ್ದಾರ್ ಟಿ. ರಮೇಶ್ ಬಾಬು ಅವರು ಈ ಪ್ರದೇಶದಲ್ಲಿ ಸೆಕ್ಷನ್‌ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪಿಎಫ್‌ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್‌ ಹಮೀದ್‌ ಮೆಜೆಸ್ಟಿಕ್‌, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್‌ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫಿ ಅವರನ್ನು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಪಿಎಫ್‌ಐ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಅಬ್ದುಲ್‌ ಹಮೀದ್‌ ಮೆಜೆಸ್ಟಿಕ್‌ ಅವರನ್ನು ಮಾತ್ರ ಬಿಡುಗೊಡೆಗೊಳಿಸಿದ್ದರು.

ಸದ್ಯ ಉಪ್ಪಿನಂಗಡಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮೀಸಲು ಪೋಲಿಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ.