ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ಮರು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಓಮಿಕ್ರಾನ್ ತಳಿ ಭೀತಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಅದು ಮುಂದೂಡಿದೆ.
ಭಾರತದಿಂದ ಹೋಗುವ ಮತ್ತು ಭಾರತಕ್ಕೆ ಒಳ ಬರುವ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟವನ್ನು ಪುನಃ ಆರಂಭಿಸುವ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ ಅದು ಈ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ. ವಿಮಾನ ಸಂಚಾರವನ್ನು ಆರಂಭಿಸುವ ದಿನಾಂಕದ ಬಗ್ಗೆ ಅದು ಶೀಘ್ರವೇ ಪ್ರಕಟಿಸುವ ನಿರೀಕ್ಷೆ ಇದೆ.
ದೇಶಾದ್ಯಂತ ವಿಮಾನ ನಿಲ್ದಾಣಗಳು ಈಗಾಗಲೇ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಸರಣಿ ನಿರ್ಬಂಧಗಳನ್ನು ವಿಧಿಸುತ್ತಿದೆ. ಮುಖ್ಯವಾಗಿ ಕೇಂದ್ರ ಸರ್ಕಾರ ‘ಅಪಾಯದಲ್ಲಿ ಇರುವ’ ಎಂದು ಗುರುತಿಸಿರುವ ದೇಶಗಳ ಪ್ರಯಾಣಿಕರಿಗೆ ಪರೀಕ್ಷೆ ಹಾಗೂ ಕ್ವಾರೆಂಟೈನ್ ಕಡ್ಡಾಯಗೊಳಿಸಿದೆ.
ಪ್ರಸ್ತುತ ನಡೆಯುತ್ತಿರುವ ಏರ್ ಬಬಲ್ ಒಪ್ಪಂದ ಆಧಾರಿತ ವಿಮಾನ ಸಂಚಾರ ಮುಂದುವರಿಯಲಿದೆ ಎಂದು DGCA ತಿಳಿಸಿದೆ. ‘ಜಾಗತಿಕ ಸನ್ನಿವೇಶ ಸ್ವರೂಪದ ಹಿನ್ನೆಲೆಯಲ್ಲಿ, ಎಲ್ಲ ಪಾಲುದಾರರ ಜತೆಗಿನ ಮಾತುಕತೆಯ ಜತೆಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ. ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ಪ್ರಯಾಣಿಕ ಸೇವೆಗಳನ್ನು ಮರು ಆರಂಭಿಸುವ ದಿನಾಂಕದ ಕುರಿತಾದ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಕೋವಿಡ್ 19 ಲಾಕ್ಡೌನ್ ಜಾರಿಯಾದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಅದರ ಬಳಿಕ ಸೋಂಕಿನ ಪ್ರಮಾಣ ಕಡಿಮೆಯಾದ ಬಳಿಕ ಕೆಲವು ದೇಶಗಳ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡು ಅವುಗಳ ನಡುವೆ ಮಾತ್ರ ವಿಮಾನ ಸಂಚಾರ ಆರಂಭಿಸಲಾಗಿತ್ತು. ಸುಮಾರು 20 ತಿಂಗಳ ಬಳಿಕ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಯಥಾಸ್ಥಿತಿಗೆ ತರಲು ಕೇಂದ್ರ ಸರ್ಕಾರ ಬಯಸಿತ್ತು. ಆದರೆ ಓಮಿಕ್ರಾನ್ ಆತಂಕ ಅದಕ್ಕೆ ಮತ್ತೆ ಹಿನ್ನಡೆ ಉಂಟುಮಾಡಿದೆ.
ಪ್ರಸ್ತುತ ಎದುರಾಗಿರುವ ಹೊಸ ತಳಿ ಕೋವಿಡ್ ಸುತ್ತಲಿನ ಆತಂಕ ನಿವಾರಣೆಯಾಗುವವರೆಗೂ ವಿಮಾನ ನಿಲ್ದಾಣಗಳಲ್ಲಿ ಜಾರಿಗೆ ತಂದಿರುವ ನಿಯಂತ್ರಣ ಕ್ರಮಗಳು ಮುಂದುವರಿಯಲಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ವಿಮಾನ ಹಾರಾಟ ಎಂದಿನಂತೆ ನಡೆಯಲಾರದು ಎನ್ನಲಾಗಿದೆ.
ಶಾಲಾ ಕಾಲೇಜುಗಳು, ಕಚೇರಿಗಳು, ಸಿನಿಮಾ ಮಂದಿರಗಳು, ಮಾಲ್ಗಳು ಸಂಪೂರ್ಣವಾಗಿ ತೆರೆದಿವೆ. ದೇಶಿ ವಿಮಾನಗಳು ಪೂರ್ಣ ಪ್ರಮಾಣದಲ್ಲಿ ಸಂಚಾರ ನಡೆಸುತ್ತಿವೆ. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಕೂಡ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ ಡಿ. 15ರಿಂದ ವಿಮಾನ ಸಂಚಾರ ಆರಂಭಿಸಲಾಗುವುದು ಎಂದು ನವೆಂಬರ್ 26ರಂದು ಕೇಂದ್ರ ಸರ್ಕಾರ ಹೇಳಿತ್ತು.