janadhvani

Kannada Online News Paper

ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ, ವದಂತಿ ಹಬ್ಬಿಸಿದರೆ ಕಠಿಣ ಕ್ರಮ -ಕೆ ಸುಧಾಕರ್

ಒಂದು ವೇಳೆ ಲಾಕ್‍ಡೌನ್ ಕುರಿತಂತೆ ವದಂತಿ ಹಬ್ಬಿಸಿದವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ.

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಯಾವುದೇ ಲಾಕ್‍ಡೌನ್ ಇಲ್ಲ. ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಶುರುವಾಗಿದ್ದು, ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವುದಕ್ಕೆ ಇನ್ನೂ ಒಂದು ವಾರ ಬೇಕಾಗುತ್ತದೆ. ಡಿಸೆಂಬರ್ 1 ರಂದು ನಮಗೆ ವರದಿ ಬರುತ್ತದೆ. ಈಗಾಗಲೇ 12 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. ಎಲ್ಲರನ್ನೂ ಸಹ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 12-13 ದಿನಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದ್ದು, ಅವರ ಫೋನ್ ನಂಬರ್‌ರನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆಫ್ರಿಕಾದಲ್ಲಿ ಇರುವ ನನ್ನ ವೈದ್ಯ ಸ್ನೇಹಿತರ ಜೊತೆ ಮಾತಾಡಿದ್ದೇನೆ. ಹೊಸ ತಳಿ ಬೇಗ ಹರಡುತ್ತದೆ. ಆದರೆ ಡೆಲ್ಟಾ ಅಷ್ಟು ಭೀಕರತೆ ಇರುವುದಿಲ್ಲ. ವಾಂತಿ, ಪಲ್ಸ್ ರೇಟ್ ಜಾಸ್ತಿಯಾಗುವುದು, ತಲೆ ಸುತ್ತುವುದು, ಆಯಾಸ ಆಗುವುದು ಇದು ಹೊಸ ತಳಿ ರೋಗ ಲಕ್ಷಣಗಳಾಗಿದೆ. ಡೆಲ್ಟಾ ರೀತಿ ಟೇಸ್ಟ್, ವಾಸನೆ ಇಲ್ಲದೆ ಇರುವ ಲಕ್ಷಣ ಇದರಲ್ಲಿ ಇರುವುದಿಲ್ಲ. ಹೊಸ ತಳಿಯಲ್ಲಿ ಐಸಿಯು ಕೇಸ್ ಕಡಿಮೆ ಇರುತ್ತದೆ. ಹೊಸ ತಳಿ ಡೆಲ್ಟಾಗಿಂತ ತೀವ್ರತೆ ಕಡಿಮೆ ಇರುತ್ತದೆ ಎಂದು ತಿಳಿಸಿದ್ದಾರೆ. ಆದರೆ ಐಸಿಎಂಆರ್ ವರದಿ ಬರುವವರೆಗೂ ನಾವು ಈ ಬಗ್ಗೆ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಯಾವುದೇ ಲಾಕ್‍ಡೌನ್ ಮಾಡುವ ಪ್ರಸ್ತಾಪವೇ ಸರ್ಕಾರ ಮುಂದೆ ಇಲ್ಲ. ಒಂದು ವೇಳೆ ಲಾಕ್‍ಡೌನ್ ಕುರಿತಂತೆ ವದಂತಿ ಹಬ್ಬಿಸಿದವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಜನ ಬಹಳ ನಷ್ಟ ಅನುಭವಿಸುದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ, ಮತ್ತೆ ಆತಂಕ ಸೃಷ್ಟಿ ಮಾಡೋದು ಬೇಡ. ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಎಚ್ಚರವರಿಸಬೇಕು. ಸಾಮಾಜಿಕ ಜಾಲತಾಣಗಳು ತಪ್ಪು ಸುದ್ದಿ ಹರಡಿಸಬಾರದು. ಮಾಧ್ಯಮಗಳು ಎಚ್ಚರಿಕೆ, ಜಾಗೃತಿ ಕೊಡುವ ಕೆಲಸ ಮಾಡುತ್ತಿದೆ ಅದನ್ನು ಮುಂದುವರೆಸಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

error: Content is protected !! Not allowed copy content from janadhvani.com