janadhvani

Kannada Online News Paper

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿರತೆ ಕಾಟ- ಆತಂಕ

ಚಿರತೆ ಮಾತ್ರವಲ್ಲದೆ ನವಿಲು, ಕಾಡು ಹಂದಿ, ನರಿಗಳು ಸೇರಿದಂತೆ ಕಾಡು ಪ್ರಾಣಿ ಮತ್ತು ಪಕ್ಷಿಗಳು ರನ್ ವೇ ಬಳಿ ಕಂಡು ಬರುತ್ತಿವೆ.

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿರತೆ ಕಾಟ ಶುರುವಾಗಿದೆ. ರಾತ್ರಿ ವೇಳೆ ರನ್‌ ವೇ ಬಳಿ 3-4 ಬಾರಿ ಚಿರತೆ ಓಡಾಟ ಕಂಡುಬರುತ್ತಿದೆ. ಇದು ವಿಮಾನನಿಲ್ದಾಣ ದ ಭದ್ರತಾ ವಿಭಾಗದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ ಮಾತ್ರವಲ್ಲದೆ ನವಿಲು, ಕಾಡು ಹಂದಿ, ನರಿಗಳು ಸೇರಿದಂತೆ ಕಾಡು ಪ್ರಾಣಿ ಮತ್ತು ಪಕ್ಷಿಗಳು ರನ್ ವೇ ಬಳಿ ಕಂಡು ಬರುತ್ತಿವೆ.

ಚಿರತೆ ಪತ್ತೆಯಾಗಿರುವ ಕಾರಣ ಆತಂಕಗೊಂಡಿರುವ ವಿಮಾನ ನಿಲ್ದಾಣ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅರಣ್ಯ ಇಲಾಖೆಯ ಪ್ರಾಣಿ ಸರ್ವೇ ವರದಿ ಪ್ರಕಾರ ಕಳೆದ ಐದು ವರ್ಷಗಳ ಹಿಂದೆ ಮಂಗಳೂರು ರೇಂಜ್ ವ್ಯಾಪ್ತಿಯಲ್ಲಿ 2-3 ಚಿರತೆಗಳಿದ್ದವು ಆದರೆ ಪ್ರಸ್ತುತ ಇವುಗಳ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಬಜ್ಪೆಯ ಕೆಂಜಾರಿನಲ್ಲಿ ಗುಡ್ಡದ ಮೇಲಿರುವ ವಿಮಾನ ನಿಲ್ದಾಣದ ಸುತ್ತಮುತ್ತ ಕಾಡು ಇರುವ ಕಾರಣ ಚಿರತೆಗಳ ಓಡಾಟ ಸಾಮಾನ್ಯ ಎಂದು ಹೇಳಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತು ಚಿರತೆಗಳು ವಿಮಾನ ನಿಲ್ದಾಣ ಪ್ರವೇಶಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಚಿರತೆ ರನ್‌ ವೇ ಸುತ್ತ ಕಾಣಿಸಿಕೊಳ್ಳುತ್ತಿವೆ. ಆಹಾರ ಅರಸಿ ಆಕಸ್ಮಿಕವಾಗಿ ಬಂದಿರಬಹುದು ಅಂದುಕೊಂಡಿದ್ದ ಅಧಿಕಾರಿಗಳಿಗೆ ಇತ್ತೀಚೆಗೆ ಸರಾಗವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ತಂದಿದೆ. ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಂದರ್ಭ ರನ್ ವೇ ಆಸುಪಾಸು ಪ್ರಾಣಿಗಳ ಓಡಾಟ ತೀರಾ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ವಿಮಾನ ನಿಲ್ದಾಣದೊಳಗೆ ಚಿರತೆ ಹಿಡಿಯಲು ಬೋನು:

ಚಿರತೆಗಳಿಂದ ಭಯಗೊಂಡಿರುವ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಚುರುಕಾಗಿದ್ದು, ಚಿರತೆ ಪತ್ತೆ ಕಾರ್ಯಾಚರಣೆ ಆರಂಭಿಸಿದೆ. ಚಿರತೆ ಸೆರೆ ಹಿಡಿಯಲು ವಿಮಾನ ನಿಲ್ದಾಣದ ಒಳಗೆ 3 ಬೋನುಗಳನ್ನು ಇಡಲಾಗಿದೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ 2 ಬೋನು ಇಡಲಾಗಿದೆ. ಒಟ್ಟು 5 ಬೋನುಗಳನ್ನು ಅಳವಡಿಸಲಾಗಿದೆ.

ಚಿರತೆಗಳ ಓಡಾಟದಿಂದ ವಿಮಾನನಿಲ್ದಾಣ ನಿಲ್ದಾಣದ ಅಧಿಕಾರಿಗಳು ಹಾಗು ಸಾರ್ವಜನಿಕರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ವಿಮಾನ ನಿಲ್ದಾಣ ಸುತ್ತಮುತ್ತಲಲ್ಲಿ ಚಿರತೆಯ ಚಲನವಲನ ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದ್ದು ಚಿರತೆ ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

ಚಿರತೆಗಳು ರನ್ ವೇ ಪ್ರವೇಶಿಸದಂತೆ ಬಾರಿ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವೇಳೆ ವಿಮಾನ ಲ್ಯಾಂಡಿಂಗ್ ಅಥವಾ ಟೇಕಾಫ್ ಆಗುವ ವೇಳೆ ಚಿರತೆ ಅಡ್ಡಬಂದರೆ ಅನಾಹುತವಾಗುವ ಆತಂಕ ವಿಮಾನ ನಿಲ್ದಾಣದ ಪ್ರಾಧಿಕಾರದ್ದು ಆಗಿದೆ.