ರಿಯಾದ್ : ಇತ್ತೀಚಿನ ಬೆಳವಣಿಗೆಯ ಪ್ರಕಾರ, ಸೌದಿ ಅರೇಬಿಯಾವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಅನ್ನು ದೇಶಕ್ಕೆ ಪ್ರವೇಶಿಸಲು ಅನುಮೋದಿತ ಕೋವಿಡ್ ಲಸಿಕೆ ಎಂದು ಗುರುತಿಸಿದೆ. ಹಾಗಾಗಿ, ಪೂರ್ಣ ಪ್ರಮಾಣದಲ್ಲಿ ಈ ಲಸಿಕೆಯನ್ನು ಪಡೆದಿರುವ ಭಾರತೀಯರಿಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯವಿಲ್ಲದೇ, ದೇಶಕ್ಕೆ ಪ್ರವೇಶಿಸಲು ಸೌದಿ ಅರೇಬಿಯಾ ಅನುಕೂಲ ಮಾಡಿಕೊಟ್ಟಿದೆ.
ಇದರೊಂದಿಗೆ , ಕೋವಿಶೀಲ್ಡ್ ಈಗ ದೇಶವು ಅನುಮೋದಿಸಿದ ಎಂಟು ಇತರ ಲಸಿಕೆಗಳ ಪಟ್ಟಿಗೆ ಸೇರಿಕೊಂಡಿದೆ, ಫಿಜರ್ ಬಯೋಎನ್‌ಟೆಕ್, ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ, ಕಾಮಿರ್ನಾಟಿ, ಎಸ್‌ಕೆ ಬಯೋಸೈನ್ಸ್, ಮಾಡರ್ನಾ, ವ್ಯಾಕ್ಸ್‌ಜೆವ್ರಿಯಾ, ಸ್ಪೈಕ್‌ವಾಕ್ಸ್ ಮತ್ತು ಜಾನ್ಸನ್ ಮತ್ತು ಜಾನ್ಸನ್ ಸೌದಿ ಅನುಮೋದಿತ ಲಸಿಕೆಗಳಾಗಿವೆ
ಸೌದಿ ಪ್ರವಾಸೋದ್ಯಮ ಪ್ರಾಧಿಕಾರವು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸೌದಿ ಅನುಮೋದಿತ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ಭಾರತೀಯ ಪ್ರಯಾಣಿಕರು ಈಗ ಸಾಂಸ್ಥಿಕ ಕ್ವಾರಂಟೈನ್ ಇಲ್ಲದೆ ದೇಶವನ್ನು ಪ್ರವೇಶಿಸಲು ಸಾಧ್ಯವಾಗಲಿದೆ ಎಂದು ಹೇಳಿದೆ.
ವರದಿಗಳ ಪ್ರಕಾರ, ಸೌದಿಗೆ ಆಗಮಿಸುವ ಮೊದಲು 14 ದಿನಗಳಲ್ಲಿ ಭಾರತವನ್ನು ಹಾದುಹೋಗುವ ಅಥವಾ ಭಾರತದಿಂದ ಬರುವವರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದರೂ, ಕೋವಿಶೀಲ್ಡ್ ಅನ್ನು ಮಾನ್ಯತೆ ಪಡೆದ ಲಸಿಕೆಯಾಗಿ ಅನುಮೋದಿಸುವ ಕ್ರಮವು ಸಕಾರಾತ್ಮಕ ಬೆಳವಣಿಗೆಯಾಗಿದೆ. ಭಾರತೀಯ ಪ್ರವಾಸಿಗರಿಗೆ ತನ್ನ ಗಡಿಯನ್ನು ಮತ್ತೆ ತೆರೆಯಲು ಸೌದಿ ಸಜ್ಜಾಗಿದೆ ಎಂಬುದರ ಸೂಚನೆಯಾಗಿದೆ.