janadhvani

Kannada Online News Paper

ಮಸೀದಿ ಮೇಲಿನ ದಾಳಿ: ಐಕ್ಯತೆಯನ್ನು ಒಡೆಯುವ ಶಕ್ತಿಗಳನ್ನು ಮಟ್ಟಹಾಕ ಬೇಕು- ಡಿವೈಎಫ್ಐ

ಪೊಲೀಸ್ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಘಟನೆಗಳಿಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಪ್ರಕರಣದಡಿ ಶಿಕ್ಷೆಗೊಳಪಡಿಸಬೇಕು

ಮಂಗಳೂರು, ನ.15: ಇಲ್ಲಿನ ಹೊರವಲಯ ಬೋಳಿಯಾರು ಸುಬ್ಬಗುಳಿ ಮಸೀದಿ ಮೇಲೆ ನಿನ್ನೆ ತಡರಾತ್ರಿ ಸಂಘಪರಿವಾರಕ್ಕೆ ಸೇರಿದ ಗೂಂಡಾಗಳು ಪ್ರದೇಶದ ಶಾಂತಿ, ನೆಮ್ಮದಿಯನ್ನು ಹಾಳುಗೆಡೆವಲು ನಡೆಸಿದ ದಾಳಿಯನ್ನು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಖಂಡನೆಯನ್ನು ವ್ಯಕ್ತಪಡಿಸಿದೆ.

ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಪ್ರಕರಣದ ಹಿಂದಿರುವ ನೈಜ ಶಕ್ತಿಯನ್ನು ಬಯಲಿಗೆಳೆಯಲು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಉಳ್ಳಾಲ ಭಾಗದ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಸಂಘಪರಿವಾರದ‌ ಗೂಂಡಾ ಕಾರ್ಯಕರ್ತರು ಅಶಾಂತಿಯನ್ನು ಸೃಷ್ಟಿಸಿ ಹಿಂದು ಮುಸ್ಲಿಂ ಐಕ್ಯತೆಯನ್ನು ಒಡೆಯುವ ಹಾಗೂ ಕೋಮು ಸಂಘರ್ಷಕ್ಕೆ ಎಡೆಮಾಡುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ನಿನ್ನೆ ರಾತ್ರಿ ಕುರ್ನಾಡು ಭಾಗದ ಬೋಳಿಯಾರ್ ಸುಬ್ಬಗುಳಿ ಮಸೀದಿ ಮೇಲೆ ದಾಳಿ ನಡೆಸಿರುತ್ತಾರೆ.

ಈ ದಾಳಿಯ ಹಿಂದೆ ಬಿಜೆಪಿ ಪಕ್ಷದ ಹಿಡನ್ ಅಜೆಂಡಾ ಅಡಗಿದ್ದು ಬಿಜೆಪಿ ‌ಪಕ್ಷದ ಆಡಳಿತ ವೈಫಲ್ಯವನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಿಸುವ ಉದ್ದೇಶದಿಂದಲೇ ಜಿಲ್ಲೆಯ ವಿವಿಧ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆಯಲು ಪ್ರಾರಂಭಗೊಂಡಿದೆ. ಇತ್ತೀಚೆಗೆ ಉಳ್ಳಾಲದ ಪರಿಸರದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸುವ ಪ್ರಯತ್ನ ,ಕೆಲದಿನಗಳ ಹಿಂದೆ ಮಂಗಳೂರಿನ ಆಸುಪಾಸುಗಳಲ್ಲಿ ನಾಗನ ಕಟ್ಟೆಗಳನ್ನು ಧ್ವಂಸ ಗೊಳಿಸುವ, ಅಮಾಯಕ ಯುವಕ ಮೇಲೆ ದಾಳಿ ನಡೆಯುವ ಆ ಮೂಲಕ ಹಿಂದು ಮುಸ್ಲಿಮ್ ಪರಸ್ಪರ ಸಂಘರ್ಷಕ್ಕೆ ಎಡೆಮಾಡಿಕೊಡುವ ಮೂಲಕ ಜನರನ್ನು ಬಾಧಿಸುವ ಮೂಲ ಉದ್ದೇಶದ ಬದಲಾಗಿ ಇಂತಹ ಘಟನೆಗಳನ್ನೇ ಮುನ್ನಲೆಗೆ ತರುವ ಯೋಜನೆ ಈ ರೀತಿಯ ಪ್ರಕರಣಗಳ ಹಿಂದೆ ಅಡಗಿದೆ.

ಸಮಾಜದ ಸ್ವಾಸ್ಥ್ಯ , ನೆಮ್ಮದಿಯನ್ನು ಭಂಗ ತರುವ ಘಟನೆಗಳನ್ನು ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲೆಯ ಪೊಲೀಸ್ ಇಲಾಖೆ ಇಂತಹವುಗಳನ್ನು ತಡೆಯುವ , ತಪ್ಪಿತಸ್ಥರನ್ನು ಬಂಧಿಸುವ ಮತ್ತು ಅದರ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯುವ ಕೆಲಸಗಳನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.

ಪೊಲೀಸ್ ಇಲಾಖೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಘಟನೆಗಳಿಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಪ್ರಕರಣದಡಿ ಶಿಕ್ಷೆಗೊಳಪಡಿಸಬೇಕು ಹಾಗೂ ಹಿಂದಿರುವ ಶಕ್ತಿಯನ್ನು ಬಯಲಿಗೆಳೆಯಬೇಕೆಂದು ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಒತ್ತಾಯಿಸುತ್ತದೆ. ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷರಾದ ರಫೀಕ್ ಹರೇಕಳ, ಕಾರ್ಯದರ್ಶಿ ಸುನೀಲ್‌ ತೇವುಲ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !! Not allowed copy content from janadhvani.com