janadhvani

Kannada Online News Paper

ಮುಸ್ಲಿಮರ ಹಣ ಪಡೆಯುವ ಶರಣ್ ಪಂಪ್‌ವೆಲ್‌ಗೆ,ಮುಸ್ಲಿಮರು ಯಾಕೆ ಬೇಡ?

ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ.

ಮಂಗಳೂರು, ನ.15: ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಈ ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು.

ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲದ ಬಗ್ಗೆ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಬಿರುವರ್ ಕುಡ್ಲ ಕಾನೂನು ಹೋರಾಟ ನಡೆಸಲಿದೆ ಎಂದು ಲಕ್ಷ್ಮೀಶ್ ತಿಳಿಸಿದರು.

ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ ಶರಣ್ ಪಂಪ್‌ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಗುತ್ತಿಗೆ ಹಿಡಿದು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿ ಕೊಡುವವರೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಬಲ್ಲಾಳ್‌ ಬಾಗ್‌ನಲ್ಲಿ ಬಿರುವೆರ್ ಕುಡ್ಲ ಜನಪರ ಕೆಲಸ ಮಾಡಿದೆಯೇ ವಿನಃ ಶರಣ್ ಪಂಪ್‌ವೆಲ್‌ರಂತೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಿಶೋರ್ ಬಾಬು, ವಿದ್ಯಾ, ರಾಕೇಶ್, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com