ಮಂಗಳೂರು, ನ.15: ಕುಂದಾಪುರ ಮೂಲದ ಮಹಿಳೆಯು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅ.15ರಂದು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈ ಮಗುವನ್ನು ಅದಲು-ಬದಲು ಮಾಡಲಾಗಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದರು. ಈ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಇದು ಭಾರೀ ಸುದ್ದಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಪರೀಕ್ಷೆಯ ವರದಿ ಬರುವ ಮುನ್ನವೇ ಮಗು ಮೃತಪಟ್ಟಿದೆ. ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಮಗುವಿನ ಅಂತ್ಯಸಂಸ್ಕಾರ ಕಾನೂನಿನ ಪ್ರಕಾರವೇ ನಡೆಯಲಿದೆ. ಮಗುವಿನ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
”ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು ಮಗು ಹೆಣ್ಣು ಎಂದು ಹೇಳಿದ್ದರು. ದಾಖಲೆಗಳಲ್ಲಿ ಕೂಡಾ ಅದನ್ನೇ ನಮೂದಿಸಿದ್ದರು. ಆದರೆ ನಮ್ಮ ಕೈಗೆ ಗಂಡು ಮಗುವನ್ನು ಕೊಟ್ಟಿದ್ದರು” ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ”ಮಗುವಿನ ಡಿಎನ್‌ಎ ಪರೀಕ್ಷೆ ಇನ್ನೂ ಬಂದಿಲ್ಲ. ಅದಕ್ಕಿಂತ ಮುಂಚೆಯೇ ಮಗು ಮೃತಪಟ್ಟಿವೆ. ಆಸ್ಪತ್ರೆಯಲ್ಲಿ ಚೆನ್ನಾಗಿ ಆರೈಕೆ ಮಾಡದ ಕಾರಣ ಹೀಗಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಗುವನ್ನು ಬಿಟ್ಟುಕೊಡುವುದಾಗಿ ವೈದ್ಯರು ತಿಳಿಸಿದರು. ಹಾಗಾಗಿ ನಾವು ಮೃತದೇಹವನ್ನು ಪಡೆದು ಕುಂದಾಪುರ ಮಸೀದಿಯ ಆವರಣದಲ್ಲಿ ದಫನ ಮಾಡುವೆವು. ಆ ಬಳಿಕ ಕಾನೂನು ಹೋರಾಟ ಮುಂದುವರಿಸುವೆವು” ಎಂದು ಪೋಷಕರು ತಿಳಿಸಿದ್ದಾರೆ.