ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ಬೆಲೆ ಏರಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಕಿಡಿಕಾರಿದ್ದಾರೆ.
ಸರಕಾರದ ಅಭಿವೃದ್ಧಿಯ ಮಾತುಗಳು ಬಹಳ ದೂರವಿದ್ದು, ಲಕ್ಷಾಂತರ ಕುಟುಂಬಗಳು ಇಂದು ಮತ್ತೆ ಕಟ್ಟಿಗೆ ಒಲೆ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟ್ಟೀಟ್‌ನಲ್ಲಿ ಹರಿಹಾಯ್ದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಗಾಡಿ ರಿವರ್ಸ್ ಗೇರ್‌ನಲ್ಲಿದೆ” ಎಂದು ರಾಹುಲ್ ಗಾಂಧಿ ಅವರು ವ್ಯಂಗ್ಯವಾಡಿದ್ದು, “ಅಭಿವೃದ್ಧಿಯ ಮಾತುಗಳು ಮೈಲುಗಟ್ಟಲೆ ದೂರವಿದೆ. ಲಕ್ಷಾಂತರ ಕುಟುಂಬಗಳು ಕಟ್ಟಿಗೆ ಒಲೆ ಉರಿಸುವ ಪರಿಸ್ಥಿತಿ ಬಂದಿದೆ,” ಎಂದಿದ್ದಾರೆ.
ಹಿಂದಿ ಭಾಷೆಯಲ್ಲಿ ಟ್ಟೀಟ್ ಮಾಡಿರುವ ಅವರು, “ಮೋದಿಯವರ ಅಭಿವೃದ್ಧಿಯ ವಾಹನ ರಿವರ್ಸ್ ಗೇರ್‌ನಲ್ಲಿದೆ ಮತ್ತು ಅದರ ಬ್ರೇಕ್ ಕೂಡ ವಿಫಲವಾಗಿದೆ,” ಎಂದು ಲೇವಡಿ ಮಾಡಿದ್ದಾರೆ. ಪ್ರೈಸ್‌ಹೈಕ್ (ಬೆಲೆ ಏರಿಕೆ) ಹ್ಯಾಷ್‌ಟ್ಯಾಗ್ ಹಾಕಿ ಅವರು ಈ ಟ್ಟೀಟ್ ಮಾಡಿದ್ದಾರೆ.
ವರದಿಯೊಂದರ ತುಣುಕನ್ನೂ ಟ್ಟೀಟ್‌ನಲ್ಲಿ ರಾಹುಲ್ ಗಾಂಧಿ ಲಗತ್ತಿಸಿದ್ದಾರೆ.
‘ಸಮೀಕ್ಷೆಯೊಂದರ ಪ್ರಕಾರ ದೇಶದ ಗ್ರಾಮೀಣ ಭಾಗದಲ್ಲಿ ಆಹಾರ ಬೇಯಿಸಲು ಶೇ. 42ರಷ್ಟು ಜನರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. ಕಾರಣ ಅವರಿಗೆ ಸಿಲಿಂಡರ್‌ನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಇವರುಗಳು ಕಟ್ಟಿಗೆ ಒಲೆಗೆ ಮರಳಿದ್ದಾರೆ” ಎಂದು ಈ ವರದಿಯು ಹೇಳುತ್ತಿದೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಹಣದುಬ್ಬರ ಮತ್ತು ಬೆಲೆ ಏರಿಕೆ ಸಂಬಂಧ ನಿರಂತರವಾಗಿ ಕೇಂದ್ರ ಸರಕಾರವನ್ನು ಟೀಕಿಸುತ್ತಲೇ ಬಂದಿದೆ.ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹಾಗೂ ಅಡುಗೆ ಅನಿಲ ಸಿಲಿಂಡರ್ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಇತ್ತೀಚೆಗೆ ದೀಪಾವಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಿದ್ದು, ಬೆಲೆ ಏರಿಕೆಯಿಂದ ಬಳಲುತ್ತಿದ್ದ ಜನರಿಗೆ ಅಲ್ಪ ಪ್ರಮಾಣದ ರಿಲೀಫ್ ನೀಡಿವೆ. ಆದರೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಮಾತ್ರ ಕೇಂದ್ರ ಸರಕಾರ ಇನ್ನೂ ಇಳಿಕೆ ಮಾಡಿಲ್ಲ.