janadhvani

Kannada Online News Paper

NEET ಫಲಿತಾಂಶ ಪ್ರಕಟಕ್ಕೆ ಸುಪ್ರೀಂಕೋರ್ಟ್ ಅನುಮತಿ

ಇಬ್ಬರು ವಿದ್ಯಾರ್ಥಿಗಳ ಒಎಂಆರ್ ಹಾಳೆ ಮತ್ತು ಬುಕ್‍ಲೆಟ್ ಅದಲು ಬದಲಾಗಿದ್ದವು. ಈ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಫಲಿತಾಂಶ ಪ್ರಕಟಿಸಲು ತಡೆಯಾಜ್ಞೆ ನೀಡಿದ್ದಲ್ಲದೆ, ಹೊಸದಾಗಿ ಪರೀಕ್ಷೆ ನಡೆಸುವಂತೆ ಅಕ್ಟೋಬರ್ 20ರಂದು ಆದೇಶಿಸಿತ್ತು.

ನವದೆಹಲಿ, ಅ.28- ಎನ್‍ಇಇಟಿ ಫಲಿತಾಂಶವನ್ನು ಪ್ರಕಟಿಸಲು ಅನುಮತಿ ನೀಡುವ ಮೂಲಕ ದೇಶಾದ್ಯಂತ ವೈದ್ಯಕೀಯ ಪದವಿ ಪ್ರವೇಶಕ್ಕಿದ್ದ ಪ್ರಮುಖ ಅಡ್ಡಿಯನ್ನು ಸುಪ್ರೀಂಕೋರ್ಟ್ ನಿವಾರಿಸಿದೆ. 2021-22ನೇ ಸಾಲಿನ ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಳೆದ ಸೆಪ್ಟಂಬರ್ 12ರಂದು ದೇಶಾದ್ಯಂತ ರಾಷ್ಟ್ರೀಯ ಸಾಮಾನ್ಯ ಅರ್ಹತಾ ಪರೀಕ್ಷೆ (ಎನ್‍ಇಇಟಿ) ನಡೆಸಿತ್ತು.

202 ನಗರಗಳ 3,682 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 16,14,777 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. 9,588 ಕೇಂದ್ರ ಅಧಿಕ್ಷಕರು, ಉಪ ಅಧಿಕ್ಷಕರು, 5615 ವೀಕ್ಷಕರು ಕೆಲಸ ಮಾಡಿದ್ದರು. 220 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನದಲ್ಲಿ 2,69,378 ಮೌಲ್ಯಮಾಪಕರು ಭಾಗವಹಿಸಿದ್ದರು.

ಪರೀಕ್ಷೆಯ ದಿನದಂದು ಮಹಾರಾಷ್ಟ್ರದ ಕೇಂದ್ರವೊಂದರಲ್ಲಿ ವೈಷ್ಣವಿ ಭೂಪಾಲಿ ಮತ್ತು ಅಭಿಶೇಕ್ ಶಿವಾಜಿ ಎಂಬ ಇಬ್ಬರು ವಿದ್ಯಾರ್ಥಿಗಳ ಒಎಂಆರ್ ಹಾಳೆ ಮತ್ತು ಬುಕ್‍ಲೆಟ್ ಅದಲು ಬದಲಾಗಿದ್ದವು. ಈ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಫಲಿತಾಂಶ ಪ್ರಕಟಿಸಲು ತಡೆಯಾಜ್ಞೆ ನೀಡಿದ್ದಲ್ಲದೆ, ಹೊಸದಾಗಿ ಪರೀಕ್ಷೆ ನಡೆಸುವಂತೆ ಅಕ್ಟೋಬರ್ 20ರಂದು ಆದೇಶಿಸಿತ್ತು.

ಹೈಕೋರ್ಟ್‍ನ ಆದೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿತ್ತು. ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಸುಪ್ರೀಂಕೋರ್ಟ್ ಎಲ್.ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿ.ಆರ್.ಗಾವಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಾಂಬೆ ಹೈಕೋರ್ಟ್‍ನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಪರೀಕ್ಷಾ ಸಂಸ್ಥೆ ಎನ್‍ಇಇಟಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಸೂಚಿಸಿದೆ.

ತಕರಾರು ಅರ್ಜಿ ಸಲ್ಲಿಸಿರುವ ಇಬ್ಬರು ವಿದ್ಯಾರ್ಥಿಗಳ ಕುರಿತಂತೆ ದೀಪಾವಳಿ ರಜೆಯ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಪ್ರೀಕೋರ್ಟ್ ತಿಳಿಸಿದೆ. ಆದಾಗ್ಯೂ ನೋಟಿಸ್ ನೀಡಿ ಕೌಂಟರ್ ದಾಖಲಿಸಲು ಅನುಮತಿ ನೀಡಲಾಗುವುದು. ಇಬ್ಬರು ವಿದ್ಯಾರ್ಥಿಗಳಿಗಾಗಿ 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. ಈ ಮೊಲಕ ನೆನೆಗುದಿಗೆ ಬಿದ್ದಿದ್ದ ವೈದ್ಯಕೀಯ ಪದವಿ ಪ್ರವೇಶ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಂತಾಗಿದೆ.

error: Content is protected !! Not allowed copy content from janadhvani.com