ದುಬೈ: ಪೊಲೀಸರು ಹಾಗೂ ಬ್ಯಾಂಕ್ ಸೇರಿದಂತೆ ಇತರೆ ಸಂಸ್ಥೆಗಳ ಹೆಸರಿನಲ್ಲಿ ದೂರವಾಣಿ ಕರೆ ಮತ್ತು ಸಂದೇಶಗಳ ಮೂಲಕ ಹಣ ಲಪಟಾಯಿಸುವ ದಂಧೆ ಹೆಚ್ಚಳವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ವಲಸಿಗರು ನಕಲಿ ಕರೆಗಳನ್ನು ಸ್ವೀಕರಿಸಿ, ವಂಚನೆಗೆ ಬಲಿಯಾಗಿದ್ದಾರೆ. ಈ ಹಿಂದೆ ಬ್ಯಾಂಕಿನಿಂದ ಕರೆ ಮಾಡುತ್ತಿರುವುದಾಗಿ ಹೇಳುತ್ತಿದ್ದರು. ಆದರೆ ಇದೀಗ ಪೊಲೀಸರ ಹೆಸರಿನಲ್ಲಿ ವಂಚನೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಈಗ ಕೋವಿಡ್ ಲಸಿಕೆಯ ಹೆಸರಿನಲ್ಲೂ ವಂಚಕರಿಂದ ದೂರವಾಣಿ ಕರೆಗಳು ಬರುತ್ತಿರುವುದಾಗಿ ಅನುಭವಿ ವಲಸಿಗರು ಹೇಳುತ್ತಾರೆ. ಮತ್ತೆ ಕೆಲವು ಕರೆಗಳಲ್ಲಿ ದುಬೈ ಪೋಲಿಸ್ ಎಂದು ಹೇಳಿಕೊಂಡು ಎಮಿರೇಟ್ಸ್ ಐಡಿ ವಿವರಗಳನ್ನು ಕೇಳುತ್ತಾರೆ. ಅಕ್ರಮ ನಿವಾಸಿಗಳನ್ನು ಪರಿಶೀಲಿಸುವ ಮತ್ತು ಪತ್ತೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಈ ಕರೆ ಎನ್ನುತ್ತಾರೆ. ನಂತರ ತಮಗೆ ಬರುವ OTP ಸಂಖ್ಯೆಯನ್ನು ಪೋಲೀಸರಿಗೆ ನೀಡುವಂತೆ ಒತ್ತಾಯಿಸುತ್ತಾರೆ.
ಇಂತಹಾ ಮೋಸದ ಬಗ್ಗೆ ತಿಳಿವಳಿಕೆ ಇರುವ ವಲಸಿಗರೊಬ್ಬರು ಒಟಿಪಿ ಸಂಖ್ಯೆ ನೀಡದೆ ಕರೆ ಕಟ್ ಮಾಡಿದ್ದಾರೆ. ಅದಕ್ಕೆ ತಾವು ಪೋಲೀಸರ ಕರೆಯನ್ನು ಕಟ್ ಮಾಡಿದ ಕಾರಣ ಪೋಲಿಸ್ ಠಾಣೆಗೆ ತೆರಳಿ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಹಲವು ಬಾರಿ ಕರೆ ಮಾಡಿದ್ದಾರೆ.
ಹಿಂದಿನಂತೆ ಈಗಲೂ ಎಟಿಎಂ ಕಾರ್ಡ್ ವಂಚನೆ ದಂಧೆ ನಡೆಯುತ್ತಿದೆ. ಇಂತಹ ಕರೆಗಳನ್ನು ಬ್ಯಾಂಕುಗಳು ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಯುಎಇ ಹೆಸರಿನಲ್ಲಿ ಮಾಡಲಾಗುತ್ತದೆ. ಕಾರ್ಡ್ ಅಥವಾ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದೆಯೇ ಎಂದು ಕೇಳುವುದು ಮತ್ತು ಇದನ್ನು ಸರಿಪಡಿಸಲು ಕೆಲವು ಮಾಹಿತಿಯನ್ನು ಪಡೆಯುವುದು ವಿಧಾನವಾಗಿದೆ.
ಇಂತಹ ಫೋನ್ ಕರೆಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುವಾಗ ಹೆಚ್ಚಿನ ಜಾಗರೂಕರಾಗಿರಿ ಎಂದು ಅಧಿಕಾರಿಗಳು ಪದೇ ಪದೇ ಎಚ್ಚರಿಸಿದ್ದಾರೆ. ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ಮತ್ತು ಕಾರ್ಡ್ ವಿವರಗಳನ್ನು ವರ್ಗಾಯಿಸಿದಲ್ಲಿ,ತಮ್ಮ ಖಾತೆಯ ಹಣವನ್ನು ಹಿಂಪಡೆಯಲಾಗಿದೆ ಎಂಬ ಸಂದೇಶವು ತಮಗೆ ತಕ್ಷಣ ಲಭಿಸಲಿದೆ.







