ಮಂಗಳೂರು,ಅ.14:ಇಲ್ಲಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ 18 ದಿನಗಳ ಹಿಂದೆ ಹೆರಿಗೆಯಾಗಿ ಅನಾರೋಗ್ಯದಿಂದ ICU ನಲ್ಲಿರಿಸಲಾಗಿದ್ದ ಮಗುವನ್ನು ಬದಲಿಸಿ, ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕುಂದಾಪುರ ಕೋಡಿಯ ಮಹಿಳೆಯೋರ್ವರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ 27 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ವರದಿಯಲ್ಲಿ ಮಗು ಹೆಣ್ಣು ಎಂದು ನಮೂದಿಸಲಾಗಿದೆ. ಮಗುವಿನ ದೈಹಿಕ ತೂಕ ಕಡಿಮೆ ಇದೆ ಎಂಬ ಕಾರಣಕ್ಕೆ ಕಳೆದ 18 ದಿನಗಳಿಂದ ಮಗುವನ್ನು ICU ವಿನಲ್ಲಿ ಇರಿಸಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.
ಅ.14 ರಂದು ರಾತ್ರಿ ತಾಯಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡುವಂತೆ ಪೋಷಕರು ತಿಳಿಸಿದರು. ಈ ವೇಳೆ ಮಗುವಿಗೆ ಮಲ ವಿಸರ್ಜನೆಯ ತೊಂದರೆ ಇರುವುದಾಗಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇದರಿಂದ ಕುಂದಾಪುರದ ಆಸ್ಪತ್ರೆಗೆ ದಾಖಲಿಸಿ ಮಗುವಿಗೆ ಚಿಕಿತ್ಸೆ ನೀಡಲು ಪೋಷಕರು ನಿರ್ಧರಿಸಿದ್ದು, ಅಲ್ಲಿ ಮಗುವನ್ನು ಪರಿಶೀಲಿಸಿದಾಗ ಲೇಡಿಗೋಶನ್ ವೈದ್ಯರು ಮಗುವನ್ನು ಬದಲಿಸಿ ಗಂಡು ಮಗುವನ್ನು ನೀಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಮಗುವನ್ನು ಲೇಡಿಗೋಶನ್ ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ಒಪ್ಪಿಸಿದ್ದು, ತಾಯಿಗೆ ತಾನು ಹೆತ್ತ ಮಗುವನ್ನು ಮರಳಿಸುವಂತೆ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಒತ್ತಾಯಿಸಿದರು. ಬಂದರು ಪೋಲೀಸರು ಮತ್ತು ಸ್ಥಳೀಯ ಸಾಮಾಜಿಕ ಮುಖಂಡರು ಸ್ಥಳಕ್ಕಾಗಮಿಸಿದ್ದು, ಪ್ರಕರಣವನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸಿದ್ದಾರೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಆಸ್ಪತ್ರೆಯ ನಿರ್ಲಕ್ಷ ಧೋರಣೆ ವಿರುದ್ಧ ಹೋರಾಟ ಮಾಡುವಂತೆ ಆಸಿಫ್ ‘ಆಪತ್ಬಾಂಧವ’ ಸಾಮಾಜಿಕ ತಾಣದಲ್ಲಿ ಕರೆ ನೀಡಿದ್ದಾರೆ.