janadhvani

Kannada Online News Paper

ಉಳ್ಳಾಲ ಉರೂಸ್: ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ- ಜಿಲ್ಲಾಧಿಕಾರಿ

ಕೋವಿಡ್ ಕಡಿಮೆಯಾದಲ್ಲೀ, ಸರಕಾರದಿಂದ ಪೂರ್ವಾನುಮತಿ ಪಡೆದು, ಡಿಸೆಂಬರ್ ತಿಂಗಳಿನಿಂದ ನಡೆಸಲಾಗುವುದು

ಮಂಗಳೂರು,ಅ.13: ಕೋವಿಡ್-19 ಸೋಂಕಿನ ಮುಂಬರುವ ಸ್ಥಿತಿ ಗತಿಗಳನ್ನು ಪರಾಮರ್ಶಿಸಿ, ಸರಕಾರದ ಪೂರ್ವಾನುಮತಿ ತೆಗೆದುಕೊಂಡು ಈ ಬಾರಿ ಡಿಸೆಂಬರ್ 23ರಿಂದ ಜನವರಿ 16ರ ವರೆಗೆ ಉಳ್ಳಾಲ ಉರೂಸ್ ನಡೆಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಉಳ್ಳಾಲ ಉರೂಸ್ ಆಚರಣೆ ಸಂಬಂಧ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉರೂಸ್ ಆಚರಣೆಗೆ ಸಂಬಂಧ ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಒಂದು ತಿಂಗಳ ನಂತರ ಮತ್ತೊಂದು ಸಭೆ ನಡೆಸಲಾಗುವುದು, ಅದೂವರೆಗಿನ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು ಹಾಗೂ ಕೇರಳದಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಹೆಚ್ಚಿನ ಭಕ್ತಾದಿಗಳು ಸಹ ಅಲ್ಲಿಂದ ಆಗಮಿಸುವುದರಿಂದ ಈ ಸ್ಥಿತಿಗಳನ್ನು ಅವಲೋಕಿಸಿ, ಕೋವಿಡ್ ಕಡಿಮೆಯಾದಲ್ಲೀ, ಸರಕಾರದಿಂದ ಪೂರ್ವಾನುಮತಿ ಪಡೆದು, ಡಿಸೆಂಬರ್ ತಿಂಗಳಿನಿಂದ ನಡೆಸಲಾಗುವುದು, ಒಂದು ವೇಳೆ ಈ ಪರಿಸ್ಥಿತಿಯಲ್ಲಿ ವ್ಯತ್ಯಯವಾದಲ್ಲಿ, ಉರೂಸ್ ಮುಂದೂಡಲಾಗುವುದು. ಸರಕಾರಕ್ಕೆ ಈ ಬಗ್ಗೆ ವರದಿ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿ ಐದು ವರ್ಷಗಳಿಗೊಮ್ಮೆ ಉಳ್ಳಾಲ ಉರೂಸ್ ಆಚರಿಸಲಾಗುತ್ತಿದೆ. ಅದರಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಯಾವುದೇ ಹೊಸ ಸೋಂಕು ಪತ್ತೆಯಾದಲ್ಲಿ ಅದು ಐದು ವರ್ಷಗಳ ಕಾಲ ಅದರ ಪ್ರಭಾವವಿರುತ್ತದೆ. ಆ ದಿಸೆಯಲ್ಲಿ ಹೆಚ್ಚಿನ ಜಾಗರೂತೆ ಅತಿ ಅಗತ್ಯ. ಉರೂಸ್ ಆಚರಣೆ ಸಂಬಂಧ ಹಲವು ಪೂರ್ವ ಸಿದ್ದತೆಗಳನ್ನು ಸಹ ಮಾಡಿಕೊಳ್ಳಬೇಕಿದೆ, ಆ ದಿಸೆಯಲ್ಲಿ ಇದು ಪೂರ್ವಭಾವಿ ಸಭೆಯಾಗಿದೆ ಎಂದರು.

ಆರೋಗ್ಯ ಇಲಾಖೆ ವತಿಯಿಂದ ಉಳ್ಳಾಲ ಭಾಗದಲ್ಲಿ ಕೋವಿಡ್ ಲಸಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹೆಚ್ಚಿನ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅಲ್ಲಿ ಹೆಚ್ಚು ಹೆಚ್ಚು ಕೋವಿಡ್ ತಪಾಸಣೆಗಳನ್ನು ಮಾಡಬೇಕು. ಪಾಸಿಟಿವಿಟಿ ರೇಟ್ ಬಗ್ಗೆ ಗಮನವಿರಬೇಕು. ಲಸಿಕಾ ಶಿಬಿರಗಳನ್ನು ಹೆಚ್ಚು ಮಾಡಬೇಕು. ಪ್ರತಿಯೊಬ್ಬರನ್ನು ಥರ್ಮಲ್ ಸ್ಕಿçನಿಂಗ್‌ಗೆ ಒಳಪಡಿಸಬೇಕು. ಆಂಬುಲೆನ್ಸ್ ಅನ್ನು ಸದಾ ಸನ್ನದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳು, ರೋಗಿಗಳನ್ನು ಉಪಚರಿಸಲು ಸಜ್ಜಾಗಿರಬೇಕು, ಮೆಡಿಕಲ್ ಚೆಕ್‌ಪೋಸ್ಟ್ ತಂಡವನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಉರೂಸ್ ಹಿನ್ನಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಂಡು ಶಾಶ್ವತವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು, ಅದಕ್ಕಾಗಿ ಜಿಲ್ಲಾ ನಗರಾಭಿವೃದ್ದಿ ಕೋಶವು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯಿಂದ ವಿಶೇಷ ಅನುದಾನಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಉಳ್ಳಾಲ ಪಟ್ಟಣವನ್ನು ಸ್ಪಚ್ಛವಾಗಿಟ್ಟುಕೊಳ್ಳುವುದು ಹಾಗೂ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಕಾಳಜಿ ವಹಿಸುವ ಕೆಲಸಗಳನ್ನು ಮಾಡಬೇಕು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಉಳ್ಳಾಲ ವ್ಯಾಪ್ತಿಯಲ್ಲಿನ ಬೀಚ್ ಅನ್ನು ಅಭಿವೃದ್ದಿ ಪಡಿಸುವ ಕೆಲಸ ಮಾಡಬೇಕು. ಸಂಪರ್ಕ ರಸ್ತೆಗಳು, ತಾತ್ಕಾಲಿಕ ಶೌಚಾಲಯಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು, ಇದಕ್ಕಾಗಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಅವರು ನಿರ್ದೇಶನ ನೀಡಿದರು.

error: Content is protected !! Not allowed copy content from janadhvani.com