ಮಂಗಳೂರು: ಸಚಿವ ಸ್ಥಾನ ಕೈ ತಪ್ಪಿ ಹೋದ ನಂತರ ಹತಾಶೆಗೊಳಗಾಗಿರುವ ಸಿ.ಟಿ. ರವಿ ಮತಿಭ್ರಮಣೆಗೊಂಡಂತೆ ದೇಶದ ಮದ್ರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದಾರೆ ಎಂಬ ಅಸಂಬದ್ಧ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.
ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿಯವರು ಬಹುಶಃ ಸದಾ ಪ್ರಚಾರದಲ್ಲಿರಬೇಕು ಎಂಬ ದುರುದ್ದೇಶದಿಂದಲೋ ಏನೋ ಬಾಯಿಗೆ ಬಂದಂತೆ ಮಾತಾಡಿ ಕೋಮು ಗಲಭೆ ಸ್ರಷ್ಟಿಸುವ ಮೊದಲು ಇಲ್ಲಿನ ಆರೋಗ್ಯ ಇಲಾಖೆ ಇವರಿಗೆ ತಕ್ಷಣ ಚಿಕಿತ್ಸೆ ನೀಡುವುದು ಒಳಿತು ಎಂದು ಮಾಜಿ ಮೇಯರ್ ಕೆ. ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಮ್ ಧಾರ್ಮಿಕ ಶಿಕ್ಷಣ ಕೇಂದ್ರವಾದ ಮದರಸಗಳು ಈ ದೇಶದ ಸ್ವಾತಂತ್ರ್ಯ ಸೇನಾನಿಗಳನ್ನು ಸೃಷ್ಟಿಸಿದ ಮಿಲಿಟರಿ ಕೇಂದ್ರಗಳಾಗಿವೆ. ಆದುದರಿಂದಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಸ್ತುತ ಧಾರ್ಮಿಕ ಕೇಂದ್ರದ ಅಂಗಳಗಳಲ್ಲೂ ವೀಕ್ಷಿಸುವಂತಾಗಿದೆ. ಧಾರ್ಮಿಕ ಸಂಸ್ಥೆಗಳ ಅಧೀನದ ಮದರಸ ವಿಧ್ಯಾರ್ಥಿಗಳು, ಭಾರತದ ತ್ರಿವರ್ಣ ಧ್ವಜವನ್ನು ಆರೋಹಣ ಗೊಳಿಸುವ ಸಾಮಾಜಿಕ ಪ್ರಜಾ ಸೈನಿಕರಾಗಿದ್ದಾರೆ ಎಂಬುದನ್ನು ಸಿ.ಟಿ.ರವಿ ತಿಳಿಯಲಿ.
ಮದರಸ ವಿಧ್ಯಾರ್ಥಿಗಳ ಶ್ವೇತ, ಶಿರ ರುಮಾಲು, ವಸ್ತ್ರ, ಧಾರ್ಮಿಕ ಸಾಹಿತ್ಯ ಕೃತಿಗಳು, ನೈತಿಕ ಭೋಧನೆಗಳು, ಶಿಸ್ತಿನ ನಡತೆ, ದೇಶ ಪ್ರೇಮದ ಪಾಠ, ಸಾಮಾಜಿಕ ಸೇವೆ, ಆರೋಗ್ಯ ಸೇವೆ, ರಕ್ತದಾನ, ಪರಿಹಾರ ಕಾರ್ಯ, ಸ್ನೇಹ ಬಂಧ, ದೇವ ಭಕ್ತಿ, ಆರಾಧನೆ ಇತ್ಯಾದಿ ಸಮಾಜಮುಖೀ ವ್ಯವಸ್ಥೆ ಬಹುಷಃ ಸಿ.ಟಿ.ರವಿ ದೃಷ್ಟಿಗೆ ವ್ಯತ್ಯಯವಾಗಿ ಕಂಡರೆ, ಖಂಡಿತ ಅದು ಅವರ ತಪ್ಪಲ್ಲ ಬದಲಾಗಿ ಅವರಿಗೆ ಬಾಧಿಸಿದ ರೋಗದ ಕಾರಣದಿಂದ ಆಗಿದೆ. ಅದನ್ನು ನಿಯಂತ್ರಿಸಬೇಕಿದೆ.
ಈ ದೇಶದ ಮದರಸ ವಿಧ್ಯಾರ್ಥಿಗಳು ಭಾರತದ ತ್ರಿವರ್ಣ ದ್ವಜಕ್ಕೆ ಗೌರವ ಸಲ್ಲಿಸುವ ದೇಶ ಪ್ರೇಮಿಗಳಾಗಿದ್ದಾರೆ, ಅಗತ್ಯ ಬಿದ್ದಲ್ಲಿ ಈ ದೇಶಕ್ಕಾಗಿ ಪ್ರಾಣ ಸಲ್ಲಿಸಲೂ ಸಿದ್ಧರಿದ್ದಾರೆ ಎಂಬ ಸತ್ಯವನ್ನು ಸಿ.ಟಿ.ರವಿ ತಿಳಿಯಲಿ…
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.







