ರಿಯಾದ್ :ಕೋವಿಡ್ ಕಾರಣದಿಂದಾಗಿ ಭಾರತ ಸಹಿತ ಒಟ್ಟು 13 ದೇಶಗಳಿಂದ ಸೌದಿ ಅರೇಬಿಯಾಕ್ಕೆ ನೇರ ಪ್ರಯಾಣವನ್ನು ನಿರ್ಬಂಧಿಸಲಾಗಿದ್ದು, ಇದೀಗ ಭಾಗಶಃ ಸಡಿಲಿಕೆ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ಕೋವಿಡ್ ವಾಕ್ಸಿನ್ ಇದರ ಎರಡೂ ಡೋಸ್ ಸ್ವೀಕರಿಸಿದ, ಸೌದಿ ಇಕಾಮ ಇರುವ ವಲಸಿಗರಿಗೆ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡಬಹುದು ಎಂದು ರಾಯಭಾರ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿರುವುದಾಗಿ ವರದಿಯಾಗಿದೆ.
ಪ್ರಸ್ತುತ, ನಿರ್ಬಂಧಿಸಲ್ಪಟ್ಟ ದೇಶಗಳಿಂದ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿರುವವರಿಗೆ ಮಾತ್ರ ನೇರವಾಗಿ ಸೌದಿಗೆ ಪ್ರಯಾಣಿಸಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಸೌದಿಯಲ್ಲಿ 2 ಡೋಸ್ ಸ್ವೀಕರಿಸಿ ಅದು ತವಕ್ಕಲ್ನಾ ಅಪ್ಲಿಕೇಶನ್ ನಲ್ಲಿ ಅಪ್ಡೇಟ್ ಆದವರಿಗೆ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡಬಹುದು ಎಂದು ಸಚಿವಾಲಯ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇದು, ಸೌದಿಯಲ್ಲಿ 2 ಡೋಸ್ ಪಡೆದು, ನೇರವಿಮಾನ ಇಲ್ಲವೆಂಬ ಕಾರಣದಿಂದ ಊರಿಗೆ ತೆರಳದೆ ಇರುವವರಿಗೆ ಮತ್ತು ಊರಲ್ಲಿ ಉಳಿದಿರುವವರಿಗೆ ಸಮಾಧಾನಕರ ಸುದ್ದಿಯಾಗಿದೆ.